×
Ad

ಬಿಎಸ್‌ವೈ ಆಡಿಯೋ ಬಹಿರಂಗ ಕುರಿತು ಆಂತರಿಕ ಸಮಿತಿಯಿಂದ ತನಿಖೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌

Update: 2019-11-03 19:21 IST

ಬೆಂಗಳೂರು, ನ. 3: ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದ ಆಡಿಯೋ ಬಹಿರಂಗಕ್ಕೆ ಸಂಬಂಧಿಸಿದಂತೆ ಆಂತರಿಕ ಸಮಿತಿ ತನಿಖೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಡಿಯೋ ಬಿಡುಗಡೆ ಸಂಬಂಧ ಎಲ್ಲವನ್ನೂ ಹೊರಗೆಳೆಯಲಿದ್ದು, ಆಡಿಯೋ ಬಿಡುಗಡೆ ಮಾಡಿದವರು ಪಕ್ಷದ ಕಾರ್ಯಕರ್ತರೇ ಎಂಬ ಬಗ್ಗೆ ಇನ್ನೂ ಯಾವುದೇ ಸ್ಪಷ್ಟಣೆ ಇಲ್ಲ ಎಂದು ಹೇಳಿದರು.

ಆಡಿಯೋ ಬಗ್ಗೆ ನಾವು ಯಾವುದೇ ಚಿಂತೆ ಮಾಡುವುದಿಲ್ಲ. ಆಡಿಯೋದಿಂದ ಲಾಭ ಪಡೆದುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಯಶಸ್ವಿ ಆಗುವುದಿಲ್ಲ. ಸಿದ್ದರಾಮಯ್ಯನವರ ಕಥೆ ನರಿಯ ಕಥೆಯಂತಾಗಿದೆ ಎಂದು ಟೀಕಿಸಿದರು.

ಬಿಜೆಪಿ ಸರಕಾರ ಉರುಳಿದರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಅವರು ಅಂದುಕೊಂಡಿದ್ದಾರೆ. ಇದು ಅವರ ಹಗಲು ಕನಸು. ಆಡಿಯೋ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ಮಾಡಲಿ. ವಕೀಲರೂ ಆಗಿರುವ ಸಿದ್ದರಾಮಯ್ಯಗೆ ಕಾನೂನಿನ ಅರಿವು ಇದ್ದಂತೆ ಇಲ್ಲ. ಹೀಗಾಗಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದು, ಅದು ಯಶಸ್ವಿ ಆಗುವುದಿಲ್ಲ ಎಂದು ಕಟೀಲ್ ಹೇಳಿದರು.

ಸಿಎಂ ಯಡಿಯೂರಪ್ಪ ಸರಕಾರ ವಜಾ ಮಾಡುವಂತೆ ಆಗ್ರಹಿಸಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ದೂರು ನೀಡಿರುವುದು ಹಾಸ್ಯಾಸ್ಪದ. ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗ ಸುಳ್ಳು ಸಾಕ್ಷಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವುದು ರಾಜಕೀಯ ಷಡ್ಯಂತ್ರ ಎಂದು ಟೀಕಿಸಿದರು. ಸುಳ್ಳು ಹೇಳಿಕೆ ನೀಡುವುದು ಕಾಂಗ್ರಸ್ ನಾಯಕರ ನಿತ್ಯದ ಚಾಳಿ ಎಂದು ಕಟೀಲ್ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News