ಮಡಿಕೇರಿ: ಪತ್ನಿಯನ್ನು 30 ಬಾರಿ ಇರಿದು ಕೊಂದ ಪತಿ

Update: 2019-11-03 14:29 GMT
ಮುಹಮ್ಮದ್ ಶರೀಫ್

ಮಡಿಕೇರಿ, ನ.3: ಪತಿಯು ಪತ್ನಿಯನ್ನು ಇರಿದು ಕೊಲೆ ಮಾಡಿರುವ ಘಟನೆ ಮಡಿಕೇರಿಯ ಹೊಸ ಬಡಾವಣೆಯಲ್ಲಿ ನಡೆದಿದೆ. ಕಾಸರಗೋಡು ಮೂಲದ ಜುಬೈದಾ(25) ಮೃತಪಟ್ಟ ಮಹಿಳೆಯಾಗಿದ್ದು, ಮುಹಮ್ಮದ್ ಶರೀಫ್(27) ಎಂಬಾತನೇ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. 

ನ.2ರ ರಾತ್ರಿ ಈ ಘಟನೆ ನಡೆದಿದ್ದು, ಪೈಂಟಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಮುಹಮ್ಮದ್ ಶರೀಫ್‌ನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಮೃತ ಜುಬೈದಾಳ ದೇಹದ ಮೇಲೆ 30ಕ್ಕೂ ಅಧಿಕ ಇರಿದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮಡಿಕೇರಿ ನಿವಾಸಿಯಾದ ಮುಹಮ್ಮದ್ ಶರೀಫ್ 7 ವರ್ಷದ ಹಿಂದೆ ಕಾಸರಗೋಡು ಮೂಲದ ಜುಬೈದಾ ಎಂಬಾಕೆಯನ್ನು ವಿವಾಹವಾಗಿದ್ದ. ಈ ದಂಪತಿಗಳಿಗೆ 5 ಮತ್ತು 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ವಿವಾಹವಾದ ಪ್ರಾರಂಭದಲ್ಲಿ ಈ ದಂಪತಿ ಅನೋನ್ಯವಾಗಿದ್ದರು. ಆದರೆ, ಇತ್ತೀಚಿನ ಕೆಲವು ಸಮಯದಲ್ಲಿ ಪತಿ, ಪತ್ನಿಯ ನಡುವೆ ಕೌಟುಂಬಿಕ ಕಲಹ ಉಂಟಾಗುತ್ತಿತ್ತು ಎನ್ನಲಾಗಿದೆ.

ಈ ನಡುವೆ ಪತಿ ಶರೀಫ್, ಜುಬೈದಾಳ ಶೀಲವನ್ನು ಶಂಕಿಸಿ ಆಕೆಗೆ ವಿವಾಹ ವಿಚ್ಛೇದನ ನೀಡಲು ಕೂಡ ಮುಂದಾಗಿದ್ದ ಎನ್ನಲಾಗಿದೆ. ಆಕೆಯೊಂದಿಗೆ ಸಂಸಾರ ನಡೆಸಲು ಇಚ್ಛಿಸದ ಶರೀಫ್, ಜುಬೈದಾಳನ್ನು ಆಕೆಯ ಮನೆಗೂ ಬಿಟ್ಟು ಬಂದಿದ್ದ. ಬಳಿಕ ಜುಬೈದಾಳನ್ನು ಆಕೆಯ ಮನೆಯವರು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದರು ಎಂದು ತಿಳಿದು ಬಂದಿದೆ. ಕಳೆದ 2 ದಿನಗಳಿಂದ ತಮ್ಮ ಮಕ್ಕಳನ್ನು ಶರೀಫ್ ತನ್ನ ತಾಯಿಯ ಮನೆಯಲ್ಲಿ ಬಿಟ್ಟಿದ್ದ.

ಶನಿವಾರ ರಾತ್ರಿ ವೇಳೆಯಲ್ಲಿ ಪತಿ ಪತ್ನಿಯ ನಡುವೆ ಮತ್ತೆ ಕಲಹ ನಡೆದಿದ್ದು, ಈ ವೇಳೆ ಶರೀಫ್, ಪತ್ನಿ ಜುಬೈದಾಳಿಗೆ ಚಾಕುವಿನಿಂದ 30ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮನೆಯಲ್ಲಿ ಗಲಾಟೆಯ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯ ಮಾಲಕರು ನಗರ ಪೊಲೀಸರಿಗೆ ದೂರು ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜುಬೈದಾ ಕೊಲೆಯಾಗಿರುವುದು ಕಂಡು ಬಂದಿದೆ. ತಕ್ಷಣವೇ ಆರೋಪಿ ಮಹಮ್ಮದ್ ಶರೀಫ್‌ನನ್ನು ಪೊಲೀಸರು ವಶಕ್ಕೆ ಪಡೆದರು. 

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಉಪ ಅಧೀಕ್ಷಕ ದಿನೇಶ್ ಕುಮಾರ್, ಮಡಿಕೇರಿ ತಹಶೀಲ್ದಾರ್ ಮಹೇಶ್, ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News