ರಸ್ತೆ ಗುಂಡಿಗೆ ಬೈಕ್ ಬಿದ್ದು ಯುವತಿ ಸಾವು ಪ್ರಕರಣ: ಗುಂಡಿಗಳಲ್ಲಿ ಸಚಿವ ಸಿ.ಟಿ.ರವಿ ಫೋಟೊ ಇಟ್ಟು ಪ್ರತಿಭಟನೆ

Update: 2019-11-04 14:23 GMT

ಚಿಕ್ಕಮಗಳೂರು, ನ.4: ಶಾಸಕರಾಗಿ, ಉಸ್ತುವಾರಿ ಮಂತ್ರಿಯಾಗಿ, ಗುತ್ತಿಗೆದಾರರ ನಿಕಟವರ್ತಿಗಳೂ ಆಗಿ, ಏಕಪಾತ್ರಾಭಿನಯ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರ ದಿವ್ಯ ನಿರ್ಲಕ್ಷದಿಂದ, ಕಾಲೇಜು ವಿದ್ಯಾರ್ಥಿಯನ್ನು ನಗರದ ರಸ್ತೆ ಗುಂಡಿಗಳು ಬಲಿತೆಗೆದುಕೊಂಡಿವೆ. ರಸ್ತೆಗಳ ಗುಂಡಿ ಮುಚ್ಚಲು ಸಚಿವ ಸಿಟಿ ರವಿಗೆ ಇನ್ನೆಷ್ಟು ಜನರ ಪ್ರಾಣಬೇಕೆಂದು ಹೇಳಲಿ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ನಗರದ ಕೆಎಸ್ಆರ್‌ಟಿಸಿ ಬಸ್ ಡಿಪೋ ಎದುರಿನ ರಸ್ತೆಯಲ್ಲಿ ಮುಖಂಡರು, ಕಾರ್ಯಕರ್ತರು ಬಾಳೆ ಗಿಡ ನೆಟ್ಟು ಹಮ್ಮಿಕೊಂಡಿದ್ದ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಸಿಟಿ ರವಿ ಅವರು ಗುತ್ತಿಗೆದಾರರ ಪ್ರಿಯರಾಗಿರುವ ಸಚಿವರಾಗಿದ್ದು, ನಗರದಲ್ಲಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಸಚಿವರ ಆಪ್ತರೇ ಮಾಡುತ್ತಿದ್ದಾರೆ. ಈ ಕಾಮಗಾರಿಗಳನ್ನು ಅತ್ಯಂತ ಕಳಪೆಯಾಗಿ ನಿರ್ವಹಿಸಿದ್ದರ ಫಲವಾಗಿ ಎಲ್ಲ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರು, ಪ್ರವಾಸಿಗರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರವಿವಾರ ವಿದೇಶಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದ ಇಂಜಿನಿಯರ್ ಪದವೀಧರೆ ಒಬ್ಬರು ರಸ್ತೆಯ ಗುಂಡಿಗೆ ಬಲಿಯಾಗಿದ್ದಾರೆ. ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಸಚಿವ ಸಿಟಿ ರವಿ ಅವರಿಗೆ ಇನ್ನೆಷ್ಟು ಬಲಿಗಳು ಬೇಕೆಂದು ಹೇಳಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಜಿಲ್ಲಾ ಕೇಂದ್ರದಿಂದ ಹಾದು ಹೋಗುವ ಕಡೂರು ಮಂಗಳೂರು ರಸ್ತೆ ಜನರ ಜೀವನಾಡಿ ರಸ್ತೆಯಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ವ್ಯಾಪಾರ ವಹಿವಾಟು ದೃಷ್ಟಿಯಿಂದ ಈ ರಸ್ತೆ ಬಹು ಮುಖ್ಯವಾಗಿದೆ. ಆದರೆ ಈ ರಸ್ತೆ ಜನರ ಜೀವ ತೆಗೆಯುವ ರಸ್ತೆಯಾಗಿರುವುದು ದುರಂತದ ವಿಷಯವಾಗಿದೆ. ಇಂತಹ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವ, ಶಿಥಿಲಗೊಂಡಿರುವ ಸೇತುವೆಗಳನ್ನು ದುರಸ್ತಿಗೊಳಿಸುವ ಬದಲು ಜಿಲ್ಲಾ ಸಚಿವರು ಬೇರೆ ಜಿಲ್ಲೆ, ಬೆಂಗಳೂರಿನಲ್ಲಿ ಸದಾ ಪ್ರಚಾರದಲ್ಲಿ ಮುಳುಗಿರುವುದು ಈ ಜಿಲ್ಲೆಯ ದೌರ್ಭಾಗ್ಯ. ಸಚಿವ ರವಿ ಕೂಡಲೇ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯ್ ಕುಮಾರ್ ಮಾತನಾಡಿ, ಈಗಾಗಲೇ ಯುಜಿಡಿ ಹಾಗೂ ಅಮೃತ್ ಯೋಜನೆಯಿಂದಾಗಿ ನಗರದ ಎಲ್ಲಾ ರಸ್ತೆಗಳು ಗುಂಡಿ ಮತ್ತು ಹೊಂಡಗಳಾಗಿ ಪರಿವರ್ತನೆಯಾಗಿವೆ. ಇತ್ತೀಚೆಗೆ ಬಂದ ಭಾರೀ ಮಳೆಯಿಂದಾಗಿ ರಸ್ತಗಳೆಲ್ಲ ಕೆಸರು ಗದ್ದೆಗಳಾಗಿವೆ. ನಗರಸಭೆಯಾಗಲಿ, ರಾಜ್ಯ ಸರಕಾರವಾಗಲೀ, ಶಾಸಕ ಸಿಟಿ ರವಿಯಾಗಲೀ ಹದಗೆಟ್ಟ ರಸ್ತೆಗಳ ದುರಸ್ತಿಗೆ ಮುಂದಾಗದಿರುವುದು ಬೇಸರದ ವಿಷಯ. ಪ್ರವಾಸಿಗರ ಕೇಂದ್ರವಾಗಿರುವ ಚಿಕ್ಕಮಗಳೂರು ಇಲ್ಲಿನ ಹದಗೆಟ್ಟ ರಸ್ತೆಗಳಿಂದಾಗಿ ಕೆಟ್ಟ ಹೆಸರು ಪಡೆಯುತ್ತಿದೆ ಎಂದು ವಿಷಾದಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿದರು. ಧರಣಿ ವೇಳೆ ರಸ್ತೆ ಗುಂಡಿಗಳಲ್ಲಿ ಬಾಳೆಗಿಡನೆಟ್ಟು, ಸಚಿವ ರವಿ ಭಾವಚಿತ್ರಕ್ಕೆ ನೀರು ಬಿಟ್ಟು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರಾದ ಕೆ.ಮುಹಮ್ಮದ್, ಎ.ಎನ್‌ಮಹೇಶ್, ರೇಖಾ ಹುಲಿಯಪ್ಪಗೌಡ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News