ಬೆಳಗಾವಿ: ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಸಚಿವ ವಿ.ಸೋಮಣ್ಣ ಶಿಲಾನ್ಯಾಸ

Update: 2019-11-04 14:35 GMT

ಬೆಳಗಾವಿ, ನ.4: ಪ್ರವಾಹದಿಂದ ಮನೆ ಕಳೆದುಕೊಂಡಿರುವ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಮೊದಲ ಕಂತು ಒಂದು ಲಕ್ಷ ರೂ. ಪಡೆದುಕೊಂಡಿರುವ ಸಂತ್ರಸ್ತ ಕುಟುಂಬಗಳ ಮನೆ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೆ ಪದೇ ಮುಳುಗಡೆಯಾಗುವ ಗ್ರಾಮಗಳ ಜನರು ಒಪ್ಪಿದರೆ ಶಾಶ್ವತ ಸ್ಥಳಾಂತರಕ್ಕೆ ಸರಕಾರ ಸಿದ್ಧವಿದೆ. ಎಷ್ಟೇ ಹಣ ಖರ್ಚಾದರೂ ಸರಕಾರ ನೀಡಲಿದೆ ಎಂದರು.

ಸಂಪೂರ್ಣ ಮುಳುಗಡೆಯಾಗಿದ್ದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ 225 ಮನೆಗಳಿಗೆ ತಲಾ ಒಂದು ಲಕ್ಷ ರೂ.ಜಮೆ ಆಗಿದೆ. ಅದೇ ರೀತಿ 200ಕ್ಕೂ ಅಧಿಕ ಮನೆಗಳನ್ನು ‘ಎ’ ಕೆಟಗರಿಯಲ್ಲಿ ಪರಿಗಣಿಸಿ ಪರಿಹಾರ ಬಿಡುಗಡೆ ಮಾಡುವಂತೆ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

329 ಮನೆಗಳಿಗೆ ತಲಾ 50 ಸಾವಿರ ರೂ.ಬಿಡುಗಡೆ ಮಾಡಲಾಗಿದೆ. ಶಾಶ್ವತ ಸ್ಥಳಾಂತರಕ್ಕೆ ಗ್ರಾಮಸ್ಥರು ಒಪ್ಪಿದರೆ ಸರಕಾರವು ಸಿದ್ಧವಿದೆ. ಮಾಂಜರಿ ದೊಡ್ಡ ಗ್ರಾಮವಾಗಿದ್ದು, ಅಂಬೇಡ್ಕರ್ ಕಾಲನಿ ಪದೆ ಪದೇ ಮುಳುಗಡೆ ಆಗುವುದರಿಂದ ಸ್ಥಳೀಯ ಜನರ ಅಭಿಪ್ರಾಯ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಶಾಶ್ವತ ಸ್ಥಳಾಂತರಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೋಮಣ್ಣ ಹೇಳಿದರು.

ಅತೀ ಹೆಚ್ಚು ಪರಿಹಾರ: ಪ್ರವಾಹ ಸಂತ್ರಸ್ತರಿಗೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅತೀ ಹೆಚ್ಚು ಪರಿಹಾರ ಜಮೆ ಮಾಡಲಾಗಿದೆ. ಬೆಳೆ ಪರಿಹಾರ ಹೆಚ್ಚಿಸಲಾಗಿದೆ. ನೇಕಾರ ಕುಟುಂಬಗಳಿಗೂ ಮುಖ್ಯಮಂತ್ರಿಯ ಆಶಯದಂತೆ ಹೆಚ್ಚುವರಿ ಪರಿಹಾರವನ್ನು ಸರಕಾರ ನೀಡುತ್ತಿದೆ ಎಂದು ಸೋಮಣ್ಣ ತಿಳಿಸಿದರು.

ಎ ಮತ್ತು ಬಿ ಕೆಟಗರಿ ಮನೆಗಳಿಗೆ ಈಗಾಗಲೇ ಬಹುತೇಕ ಮನೆಗಳ ನಿರ್ಮಾಣಕ್ಕೆ ತಲಾ ಒಂದು ಲಕ್ಷ ರೂ.ಜಮೆ ಮಾಡಲಾಗಿದೆ. ಆದಾಗ್ಯೂ ಯಾವುದಾದರೂ ತಾಂತ್ರಿಕ ಕಾರಣಕ್ಕೆ ಪರಿಹಾರದ ಹಣ ಜಮೆಯಾಗಿರದಿದ್ದರೆ ಕೂಡಲೇ ಅಂತಹ ಮನೆಗಳಿಗೂ ಪರಿಹಾರ ನೀಡಬೇಕು ಎಂದು ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು. ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಪರಿಹಾರ ಒದಗಿಸುವಂತೆ ಸೋಮಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News