ನೆರೆ ಪೀಡಿತ ಗ್ರಾಮಗಳಲ್ಲಿ ಶಾಲೆಗಳ ನಿರ್ಮಾಣ: ಶಾಸಕರ ನಿಧಿಯಿಂದ ಅನುದಾನ ನೀಡಲು ಸುರೇಶ್ ಕುಮಾರ್ ಮನವಿ

Update: 2019-11-04 15:43 GMT

ಬೆಂಗಳೂರು, ನ.4: ನೆರೆ ಪೀಡಿತ ಗ್ರಾಮಗಳ ಶಾಲೆಗಳ ನಿರ್ಮಾಣಕ್ಕೆ ಒಂದು ಬಾರಿ 2019-20ನೇ ಸಾಲಿನಲ್ಲಿ ತಲಾ 50 ಲಕ್ಷ ರೂ.ನೀಡಲು ಕೋರಿಕೊಳ್ಳುವುದರೊಂದಿಗೆ ಆ ಹಣವನ್ನು ಸದರಿ ಖಾತೆಗೆ ನೀಡಲು ಅನುವಾಗುವಂತೆ ಸೂಕ್ತ ಆದೇಶ ಹೊರಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ಶಾಲೆಗಳು ಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಉಪಯೋಗಕ್ಕೆ ಬಾರದಂತಾಗಿವೆ. ಕೆಲವು ಕಡೆಗಳಲ್ಲಿ ಭಾಗಶಃ ಹಾನಿಯಾಗಿದ್ದರೆ, ಹಲವಾರು ಕಡೆಗಳಲ್ಲಿ ತರಗತಿ ಕೊಠಡಿಗಳನ್ನು ಮರು ನಿರ್ಮಾಣ/ದುರಸ್ತಿ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ಶಾಲಾ ಕೊಠಡಿಗಳನ್ನು ಮರು ನಿರ್ಮಾಣಕ್ಕಾಗಿ ಸುಮಾರು 600 ಕೋಟಿ ರೂ.ಗಳನ್ನು ಅಂದಾಜಿಸಿದೆ. ನೆರೆ ಹಾವಳಿಯ ಕಾರಣ ತುರ್ತಾಗಿ 160 ಕೋಟಿ ರೂ.ಗಳ ಅವಶ್ಯಕತೆಯಿದ್ದರೂ ರಾಜ್ಯ ಸರಕಾರದ ವಿಕೋಪ ಪರಿಹಾರ ನಿಧಿಯಿಂದ ಬಿಡುಗಡೆಯಾದ ಅನುದಾನದಲ್ಲಿ ಇತರ ಆದ್ಯತೆಯ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕಾದ ಅನಿವಾರ್ಯತೆಗಳಿಂದಾಗಿ ಸಮರೋಪಾದಿಯಲ್ಲಿ ಈ ಪ್ರಮುಖ ಜವಾಬ್ದಾರಿಯನ್ನು ನೆರವೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕಾರ್ಯಕ್ಕೆ ಬೃಹತ್ ಪ್ರಮಾಣದ ಹಣಕಾಸಿನ ಅಗತ್ಯವಿರುವುದರಿಂದ ಸಾರ್ವಜನಿಕ ಸಹಭಾಗಿತ್ವದ ಅವಶ್ಯಕತೆಯೂ ಇದೆ. ನಾನು ಸ್ಥಳೀಯ ಹಂತದಲ್ಲಿಯೇ ಇಂತಹ ನಿರ್ಣಯಗಳನ್ನು ಕೈಗೊಳ್ಳಲು ಅನುವಾಗುವಂತೆ ಮೊಬೈಲ್ ಆಪ್ ಅಭಿವೃದ್ಧಿಪಡಿಸಿ ಕ್ರಮವಹಿಸಲು ಇಲಾಖೆಗೆ ಸೂಚಿಸಿದ್ದು, ಈ ಕೆಲಸವೂ ಜಾರಿಯಲ್ಲಿದೆ. ಇಂತಹ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕೆಲ ಸಂಸ್ಥೆಗಳು ಈಗಾಗಲೇ ಮುಂದೆ ಬಂದಿವೆ ಎಂದು ಅವರು ಹೇಳಿದ್ದಾರೆ.

ಈ ಮಹಾತ್ಕಾರ್ಯದಲ್ಲಿ ನೆರೆಪೀಡಿತ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಲ್ಲ ನಮ್ಮ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ಕೈಜೋಡಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News