ಸಿ.ಟಿ.ರವಿ ಪ್ರೌಢಿಮೆ ಇಲ್ಲದ ಅಜ್ಞಾನಿ: ಎಚ್.ಎಚ್.ದೇವರಾಜ್

Update: 2019-11-04 16:25 GMT

ಚಿಕ್ಕಮಗಳೂರು, ನ.4: ಸಚಿವ ಸಿ.ಟಿ.ರವಿ ಪ್ರೌಢಿಮೆ ಇಲ್ಲದ ಅಜ್ಞಾನಿ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿರುವ ಅವರು ಯಾವಾಗಲೂ ನಾಡಧ್ವಜ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಕನ್ನಡ ವಿರೋಧಿ ನಿಲುವು ತಳೆದಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನಾಚರಣೆಯಂದು ಕನ್ನಡ ಧ್ವಜಾರೋಹಣ ಮಾಡದೇ ಕನ್ನಡ ನಾಡು, ನುಡಿಗೆ ಅಪಮಾನ ಮಾಡಿದ್ದಾರೆ. ಅತಿವೃಷ್ಟಿಯಿಂದ ಜಿಲ್ಲೆಯ ಜನರು ಕಂಗಾಲಾಗಿದ್ದರೂ ಸೂಕ್ತ ಪರಿಹಾರ ದೊರಕಿಸಿ ಕೊಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕನ್ನಡಿಗರ ಹಿತರಕ್ಷಣೆ ಮಾಡದ ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವನಾಗಿರಲು ನಾಲಾಯಕ್. ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆಗ್ರಹಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರ 100 ದಿನಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಈ ಸರಕಾರದ ಸಾಧನೆ ಶೂನ್ಯವಾಗಿದ್ದು, ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಇವುಗಳಿಗೆ ಪರಿಹಾರ ಕಂಡುಕೊಳ್ಳದೇ ಕೇವಲ ಬಣ್ಣದ, ಭಾವನಾತ್ಮಕ ಮಾತುಗಳಿಂದ ಜನರನ್ನು ಮರಳು ಮಾಡುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ ಸಂಭವಿಸಿರುವ ಅತಿವೃಷ್ಟಿಯಿಂದಾಗಿ ಸಾವಿರಾರು ರೈತರು, ಸಾರ್ವಜನಿಕರು ಸಂತ್ರಸ್ತರಾಗಿದ್ದಾರೆ. ಕಾಫಿ, ಅಡಿಕೆ, ಕಾಳುಮೆಣಸು, ಭತ್ತ, ತೆಂಗು ಸೇರಿದಂತೆ ಸರಕಾರಿ ಬೆಳೆಗಳು ನಾಶವಾಗಿವೆ. ಇದರಿಂದ ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ಬರಬೇಕಾದ ಸರಕಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಟಿಪ್ಪು ವಿಚಾರವನ್ನು ಮುನ್ನಲೆಗೆ ತಂದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನನ ಚರಿತ್ರೆಯನ್ನು ಪಠ್ಯ ಪುಸ್ತಕಗಳಿಂದ ತೆಗೆಯುವುದಾಗಿ ಹೇಳಿಕೆ ನೀಡುತ್ತಾ ಜನರನ್ನು ಕೆರಳಿಸುವಂತಹ ಮಾತುಗಳನ್ನಾಡುತ್ತಿದ್ದಾರೆ. ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ದೇವರಾಜ್ ಆರೋಪಿಸಿದರು.

ಕನ್ನಡ ರಾಜ್ಯೋತ್ಸವ ಕನ್ನಡಿಗರ ಹೆಮ್ಮೆಯ ಸಂಕೇತವಾಗಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಮತ್ತು ಬಿಜೆಪಿ ಸರಕಾರದ ಕನ್ನಡ ವಿರೋಧಿ ನಿಲುವಿನಿಂದಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವ ನೀರಸವಾಗಿ ನಡೆದಿದೆ. ಅನೇಕ ಜಿಲ್ಲೆಗಳಲ್ಲಿ ಬಿಜೆಪಿಯ ಸಚಿವರು ನಾಡಧ್ವಜವನ್ನು ಹಾರಿಸದೇ ಕನ್ನಡಿಗರನ್ನು ಅವಮಾನಿಸಿದ್ದಾರೆ ಎಂದ ಅವರು, ಸಚಿವ ರವಿ ವಿರುದ್ಧ ಕನ್ನಡ ಪರ ಸಂಘಟನೆಗಳು ಮೌನ ವಹಿಸಿರುವುದು ದುರಾದೃಷ್ಟಕರ ಸಂಗತಿ. ಮುಖಂಡರು ಬೀದಿಗಳಿದು ಪ್ರತಿಭಟನೆ ಮಾಡಲು ಮುಂದಾಗಬೇಕೆಂದು ದೇವರಾಜ್ ಆಗ್ರಹಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀವೃಷ್ಟಿ ಸಂದರ್ಭ ಜಿಲ್ಲಾಧಿಕಾರಿ ಉತ್ತಮವಾಗಿ ಸ್ಪಂದಿಸಿದ್ದಾರೆ. ಸಾರ್ವಜನಿಕರು ಅಗತ್ಯ ನೆರವು ನೀಡಿದ್ದಾರೆ. ಆದರೆ ಉಸ್ತುವಾರಿ ಸಚಿವ ರವಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಅತಿವೃಷ್ಟಿ ಸಂತ್ರಸ್ತರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಇದುವರೆಗೂ ತಾತ್ಕಾಲಿಕ ಪರಿಹಾರ ಒದಗಿಸಿರುವುದನ್ನು ಬಿಟ್ಟರೆ ರಾಜ್ಯ, ಕೇಂದ್ರ ಸರಕಾರಗಳಿಂದ ದೊರೆಯಬೇಕಾಗಿದ್ದ ಅಗತ್ಯ ಪರಿಹಾರಧನ ಇದುವರೆಗೂ ಸಿಕ್ಕಿಲ್ಲ ಎಂದರು.

ಅತಿವೃಷ್ಟಿಯಿಂದ ಜಮೀನು ಕಳೆದುಕೊಂಡು ಇಬ್ಬರು ರೈತರು ಆತ್ಮಹತ್ಯೆಗೆ ಶರಣಾದ ಸಂದರ್ಭದಲ್ಲಿ ಯಾವ ಮಂತ್ರಿಗಳೂ ಸ್ಥಳಕ್ಕೆ ಭೇಟಿನೀಡಿಲ್ಲ. ಸಿಟಿ ರವಿ, ಸಂಸದೆ ಶೋಭಾ ಕೂಡ ಪತ್ತೆಯೇ ಇರಲಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಿಸಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತರು ಸೇರಿದಂತೆ 30 ಸಂತ್ರಸ್ತರಿಗೆ ಸ್ವಂತ ಖರ್ಚಿನಲ್ಲಿ ಪರಿಹಾರ ಧನಗಳ ಚೆಕ್ ವಿತರಿಸಿದ್ದಾರೆ. ಇದರಿಂದ ಕಣ್ತೆರೆದ ರಾಜ್ಯ ಸರಕಾರ ಹಾಗೂ ಸಿಟಿ ರವಿ ತಡವಾಗಿ ಪರಿಹಾರ ವಿತರಿಸಿದ್ದಾರೆ ಎಂದ ಅವರು, ಬಿಜೆಪಿ ಪಕ್ಷದವರಿಗೆ ರೈತರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ರಮೇಶ್, ಚಂದ್ರಪ್ಪ, ರಂಜಿತ್, ಜಮೀಲ್ ಅಹ್ಮದ್, ಲಕ್ಷ್ಮಣ್ ಉಪಸ್ಥಿತರಿದ್ದರು.

ಪ್ರಸಕ್ತ ಟಿಪ್ಪು ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿರುವ ಸಿಎಂ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಕೆಜೆಪಿ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಟಿಪ್ಪು ಹೆಸರಿನಲ್ಲೇ ಆಣೆ ಪ್ರಮಾಣ ಮಾಡಿ ಟಿಪ್ಪು ಆದರ್ಶಗಳಂತೆ ನಡೆಯುವುದಾಗಿ ಹೇಳಿಕೊಂಡಿದ್ದರು. ಅಂದು ಕೆಜೆಪಿ ಪಕ್ಷದಲ್ಲಿದ್ದ ನಾನೇ ಇದಕ್ಕೆ ಸಾಕ್ಷಿ. ಈಗ ಬಿಜೆಪಿ ಪಕ್ಷದಿಂದ ಸಿಎಂ ಆದ ಬಳಿಕ ಟಿಪ್ಪು ಜಯಂತಿ ನಿಷೇಧಿಸಿರುವುದಲ್ಲದೇ ಪಠ್ಯದಲ್ಲಿರುವ ಟಿಪ್ಪು ಇತಿಹಾಸವನ್ನು ತೆಗೆದು ಹಾಕಲು ಮುಂದಾಗಿದ್ದಾರೆ. ಈ ಮೂಲಕ ಜನರ ದಿಕ್ಕು ತಪ್ಪಿಸುತ್ತಾ ನೈಜ ಸಮಸ್ಯೆಗಳತ್ತ ಜನರು ಮಾತನಾಡದಂತೆ ಮಾಡುತ್ತಿದ್ದಾರೆ. ಟಿಪ್ಪು ಜಯಂತಿಯನ್ನು ಪಕ್ಷದ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಆಚರಿಸುತ್ತೇವೆ. ಬಿಜೆಪಿಯವರಿಗೆ ತಾಕತ್ತಿದ್ದರೆ ತಡೆಯಲಿ.

 -ಎಚ್.ಎಚ್.ದೇವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News