ಮೈಸೂರು: ಆರ್‌ಸಿಇಪಿ ಒಪ್ಪಂದ ವಿರೋಧಿಸಿ ರೈತ ಸಂಘ ಪ್ರತಿಭಟನೆ

Update: 2019-11-04 16:52 GMT

ಮೈಸೂರು,ನ.4: ಆರ್ ಸಿಇಪಿ ಒಪ್ಪಂದ ದೇಶೀಯ ಹಾಲು ಉತ್ಪಾದಕರು ಹಾಗೂ ರೈತರ ಪಾಲಿನ ಮರಣ ಶಾಸನವಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಒಪ್ಪಂದ ಜಾರಿಯಾದರೆ ರಾಜ್ಯದ 30 ರಿಂದ 35 ಲಕ್ಷ ಕುಟುಂಬಗಳು ಸೇರಿ ದೇಶದ 10 ಕೋಟಿಗಿಂತ ಹೆಚ್ಚು ಹಾಲು ಉತ್ಪಾದಕರು, ರೈತರು, ಕೃಷಿ ಕೂಲಿ ಕಾರ್ಮಿಕರು, ಮಹಿಳೆಯರು ಮತ್ತು ಈ ಕ್ಷೇತ್ರದಲ್ಲಿ ತೊಡಗಿರುವ ಮಾರಾಟಗಾರರು ಹಾಗೂ ನೌಕರರ ಕುಟುಂಬಗಳು ಸರ್ವನಾಶವಾಗಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದನೆ ನಷ್ಟದಾಯಕವಾಗಿದ್ದರೂ ಬೇರೆ ದಾರಿ ಇಲ್ಲದೆ ರೈತರು, ಕೂಲಿಕಾರ್ಮಿಕರು, ಮಹಿಳೆಯರು, ನಿರುದ್ಯೋಗಿ ಯುವಜನರು ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಭಾರತದಲ್ಲಿ ಸಣ್ಣ ಸಣ್ಣ ರೈತರು ಹಾಲು ಉತ್ಪಾದನೆಯಲ್ಲಿ ತೊಡಗಿ ಇದನ್ನೇ ಜೀವನ ಮಾಡಿಕೊಂಡಿರುವ ಜನರ ಬದುಕು ಧೂಳೀಪಟವಾಗಲಿದೆ. ಸುಮಾರು 10 ಕೋಟಿ ಗ್ರಾಮೀಣ ಕಡು ಬಡಜನರು ಹಾಲಿನ ವ್ಯಾಪಾರದಿಂದ ಜೀವನ ಕಂಡುಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರ ಬದುಕು ಇದನ್ನೇ ಅವಲಂಬಿಸಿದೆ. ಮುಕ್ತ ವ್ಯಾಪಾರದ ಪರಿಣಾಮ ವಿದೇಶಿ ಉತ್ಪನ್ನಗಳು ಭಾರತಕ್ಕೆ ಲಗ್ಗೆ ಇಟ್ಟರೆ ಇದನ್ನೇ ನಂಬಿರುವ ಮಹಿಳೆಯರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರಲಿದ್ದು, ಕೂಡಲೇ ಈ ಒಪ್ಪಂದವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಗದೀಶ್ ಸೂರ್ಯ, ಚಿಕ್ಕಣ್ಣೇಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News