×
Ad

ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

Update: 2019-11-04 22:31 IST

ಶಿವಮೊಗ್ಗ, ನ. 4: ಒಂಟಿ ಮಹಿಳೆಯೋರ್ವರು ತಾವು ವಾಸಿಸುತ್ತಿದ್ದ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದ ಹೊಸಮನೆ ಮುಖ್ಯ ರಸ್ತೆಯಲ್ಲಿ ನಡೆದಿದೆ. 

ನಾಗಲಕ್ಷ್ಮಿ (60) ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇವರ ಪತಿ ಮೃತಪಟ್ಟಿದ್ದು, ಇವರೊಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ನಿಗೂಢ: ಇತ್ತೀಚೆಗೆ ಇವರ ಮನೆಯ ಮುಂಬಾಗಿಲಿಗೆ ಬೀಗ ಹಾಕಿದ್ದ ಸ್ಥಿತಿಯಲ್ಲಿತ್ತು. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಕಳೆದ ಅಕ್ಟೋಬರ್ 26 ರಂದು ಇವರ ಸಹೋದರ ಶ್ರೀನಾಥ್ ಎಂಬುವರು, ಸಹೋದರಿ ನಾಪತ್ತೆಯಾಗಿರುವ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. 

ಈ ನಡುವೆ ಭಾನುವಾರ ಮನೆಯ ಬೀಗ ಒಡೆದು ಪರಿಶೀಲಿಸಿದಾಗ, ಅವರ ದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News