ಮಾಲಿನ್ಯ ತಡೆಗೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ

Update: 2019-11-05 03:47 GMT

ಹೊಸದಿಲ್ಲಿ, ನ.5: ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಮಾಲಿನ್ಯ ಅಪಾಯದ ಮಟ್ಟವನ್ನು ಮೀರಿ, ಅರೋಗ್ಯ ತುರ್ತುಸ್ಥಿತಿ ಹೇರಿಕೆಯಾದ ಬೆನ್ನಲ್ಲೇ ಸುಪ್ರೀಂಕೋರ್ಟ್ ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ, ಹೊಲಗಳಲ್ಲಿ ಹುಲ್ಲಿಗೆ ಬೆಂಕಿ ಹಾಕುವುದು ತಡೆಯಿರಿ ಇಲ್ಲವೇ ನ್ಯಾಯಾಲಯ ನಿಂದನೆ ಎದುರಿಸಿ ಎಂದು ಖಡಕ್ ಎಚ್ಚರಿಕೆ ನೀಡಿದೆ.

ಎನ್‌ಸಿಆರ್ ಹಾಗೂ ದೆಹಲಿಯ ಆರೋಗ್ಯ ಸ್ಥಿತಿ ತುರ್ತು ಪರಿಸ್ಥಿತಿಗಿಂತಲೂ ಗಂಭೀರ ಹಾಗೂ ಈ ಭಾಗದ ಜನರ ಆಯುಷ್ಯವನ್ನೇ ಕ್ಷೀಣಿಸುವಂತೆ ಮಾಡಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ ಯಾವುದೇ ನಿರ್ಮಾಣ ಚಟುವಟಿಕೆ ಮತ್ತು ಕಟ್ಟಡಗಳನ್ನು ಒಡೆಯುವ ಕಾರ್ಯವನ್ನು ತಕ್ಷಣ ನಿಲ್ಲಿಸುವಂತೆ ನಿರ್ದೇಶನ ನೀಡಿದೆ. ಇದನ್ನು ಉಲ್ಲಂಘಿಸಿದಲ್ಲಿ ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಘೋಷಿಸಿದೆ.

ಡೀಸೆಲ್ ಜನರೇಟರ್‌ಗಳನ್ನು ನಿಷೇಧಿಸಲಾಗಿದ್ದು, ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಈ ರಾಜ್ಯಗಳಿಗೆ ಆದೇಶ ನೀಡಿದೆ. ಹೊಲಗಳಲ್ಲಿ ಹುಲ್ಲು ಸುಟ್ಟರೆ ಅದಕ್ಕೆ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಗ್ರಾಮ ಪ್ರಧಾನರವರೆಗೆ ಎಲ್ಲ ಅಧಿಕಾರಿಗಳು ಹೊಣೆಯಾಗುತ್ತಾರೆ. ಇದನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರೆ ಅಂಥ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ನವೆಂಬರ್ 6ರಂದು ಈ ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದ್ದು, ಹೊಲದಲ್ಲಿ ಬೆಳೆ ತ್ಯಾಜ್ಯವನ್ನು ಸುಡುವುದು ನಿಲ್ಲಿಸಲು ಏಕೆ ವಿಫಲವಾಗಿದ್ದಾಗಿ ವಿವರಣೆ ನೀಡುವಂತೆ ಸೂಚಿಸಿದೆ. ಸುಪ್ರೀಂಕೋರ್ಟ್ ದೆಹಲಿ ಮಾಲಿನ್ಯದ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಮಾಲಿನ್ಯಕಾರಕ ಪಟಾಕಿಗಳ ನಿಷೇಧ, ಸ್ವಚ್ಛ ಇಂಧನ ಬಳಕೆಯಂಥ ಸೂಚನೆ ನೀಡಿದ ಹೊರತಾಗಿಯು ಚಳಿಗಾಲ ಹಾಗೂ ವರ್ಷಾಂತ್ಯದಲ್ಲಿ ಹುಲ್ಲು ಸುಡುವ ಕಾರಣದಿಂದಾಗಿ ಮಾಲಿನ್ಯ ಮಿತಿ ಮೀರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News