ಅಕ್ರಮವಾಗಿ ನೆಲೆಸಿರುವವರನ್ನು ಮುಲಾಜಿಲ್ಲದೆ ಹೊರಗಟ್ಟುತ್ತೇವೆ: ಕೇಂದ್ರ ಸಚಿವ ಸುರೇಶ್ ಅಂಗಡಿ

Update: 2019-11-05 11:40 GMT

ಬೆಂಗಳೂರು, ನ.5: ನಮ್ಮ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಅನ್ಯ ದೇಶದವರನ್ನು ಯಾವುದೇ ಮುಲಾಜಿಲ್ಲದೆ ಹೊರಗಟ್ಟಲಾಗುವುದು ಎಂದು ಕೇದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಬುಧವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮವಾಗಿ ನೆಲೆಸಿರುವ ಬೇರೆ ದೇಶದವರಿಂದಾಗಿ ನಮ್ಮ ದೇಶದ ಅಲ್ಪಸಂಖ್ಯಾತರಿಗೆ ನಿರೀಕ್ಷಿತ ಮಟ್ಟದಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಅಲ್ಪಸಂಖ್ಯಾತರು ಬೇರೆಯವರಿಗೆ ತಮ್ಮ ಮನೆಗಳನ್ನು ಬಾಡಿಗೆಗೆ ನೀಡುವಾಗ ಅವರ ಪೂರ್ವಾಪರವನ್ನು ತಿಳಿದುಕೊಳ್ಳುವುದು ಉತ್ತಮ. ಬೇರೆ ದೇಶದವರು ಇಲ್ಲಿಗೆ ಬಂದು ನಿಮ್ಮ ಹಕ್ಕುಗಳನ್ನು ಕಸಿಯಲು ಅವಕಾಶ ಕೊಡಬೇಡಿ ಎಂದು ಸುರೇಶ್ ಅಂಗಡಿ ಮನವಿ ಮಾಡಿದರು. 

ಅಲ್ಪಸಂಖ್ಯಾತರು ಉತ್ತಮ ಶಿಕ್ಷಣ ಪಡೆಯುವ ಮೂಲಕ, ಉದ್ಯೋಗಗಳನ್ನು ಪಡೆದು ಆರ್ಥಿಕವಾಗಿ ಪ್ರಗತಿ ಹೊಂದಬೇಕು. ಅಲ್ಪಸಂಖ್ಯಾತರು ಅಭಿವೃದ್ಧಿ ಹೊಂದಿದರೆ ದೇಶವು ಮುಂದುವರೆಯುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಲೋಚನೆ ಮಾಡಬೇಕು ಎಂದು ಅವರು ತಿಳಿಸಿದರು.

ನಮ್ಮ ಭಾರತವು ತುಂಬಾ ದೊಡ್ಡ ದೇಶ. ಇಲ್ಲಿ ಎಲ್ಲ ಧರ್ಮ, ಜಾತಿ, ಜನಾಂಗಗಳ ಜನರಿದ್ದಾರೆ. ಇಂತಹ ವೈಶಿಷ್ಟತೆಯನ್ನು ಹೊಂದಿರುವ ಮತ್ತೊಂದು ದೇಶವನ್ನು ಕಾಣಲು ಸಾಧ್ಯವಿಲ್ಲ. ರಾಜಕೀಯ ಕಾರಣಗಳಿಗಾಗಿ ಹಲವು ಪಕ್ಷಗಳು, ಹಲವು ಬಗೆಯ ವಿಚಾರಗಳನ್ನು ನಿಮ್ಮ ಮುಂದಿಡುತ್ತವೆ. ಅದನ್ನೆಲ್ಲ ಮನಸ್ಸುಗಳಿಂದ ತೆಗೆದು ಹಾಕಿ, ಒಳ್ಳೆಯದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ ಎಂದು ಸುರೇಶ್ ಅಂಗಡಿ ಹೇಳಿದರು.

ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮುಖ್ತಾರ್ ಪಠಾಣ್ ಅವರನ್ನು ನೇಮಕ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅಭಿನಂದನೆ. ಸುಮಾರು 20 ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಮುಖ್ತಾರ್ ಪಠಾಣ್ ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರಕಾರಗಳಿದ್ದು, ನಾನು 15-16 ವರ್ಷಗಳಿಂದ ಸಂಸದನಾಗಿದ್ದೇನೆ. ಬಿಜೆಪಿ ಆಡಳಿತಾವಧಿಯಲ್ಲಿ ಎಲ್ಲಿಯೂ ಅಲ್ಪಸಂಖ್ಯಾತರಿಗೆ ತೊಂದರೆಯಾಗಿಲ್ಲ ಎಂದು ಸುರೇಶ್ ಅಂಗಡಿ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News