×
Ad

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅಂತಿಮ ಕಣದಲ್ಲಿ 1587 ಅಭ್ಯರ್ಥಿಗಳು

Update: 2019-11-05 17:53 IST

ಬೆಂಗಳೂರು, ನ.5: ರಾಜ್ಯದಾದ್ಯಂತ 14 ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್‌ಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 1587 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ರಾಜ್ಯದ 2 ಮಹಾನಗರ ಪಾಲಿಕೆಯ 105, 6 ನಗರಸಭೆಗಳ 194, 3 ಪುರಸಭೆಗಳ 69, 3 ಪಟ್ಟಣ ಪಂಚಾಯತ್ ನ 50 ಸೇರಿದಂತೆ 418 ವಾರ್ಡ್‌ಗಳಲ್ಲಿ 9 ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 409 ವಾರ್ಡ್‌ಗಳಿಗೆ ನ.12 ರಂದು ಚುನಾವಣೆ ನಡೆಯಲಿದೆ. 1,388 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, 13,04,614 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಅಂತಿಮ ಕಣದಲ್ಲಿರುವರ ಸಂಖ್ಯೆ: ಕಾಂಗ್ರೆಸ್-386, ಬಿಜೆಪಿ-363, ಜೆಡಿಎಸ್-233, ಸಿಪಿಐ-7, ಸಿಪಿಎಂ-12, ಬಿಎಸ್ಪಿ-24, ಎನ್‌ಸಿಸಿ-9, ಜೆಡಿಯು-5, ಎಸ್‌ಡಿಪಿಐ-16, ಕೆಪಿಜೆಪಿ-2, ಭಾರತೀಯ ಪ್ರಜಾಪಕ್ಷ-31, ಡಬ್ಲುಪಿಐ-3, ಕರ್ನಾಟಕ ರಾಷ್ಟ್ರ ಸಮಿತಿ-2, ಐಯುಎಂಎಲ್-4, ಆರ್‌ಪಿಐ-15, ಪಕ್ಷೇತರರು 475 ಸೇರಿದಂತೆ ಒಟ್ಟಾರೆ 1587 ಅಭ್ಯರ್ಥಿಗಳ ಅಂತಿಮ ಕಣದಲ್ಲಿದ್ದಾರೆ.

ಅವಿರೋಧ ಆಯ್ಕೆ: ರಾಮನಗರ ಜಿಲ್ಲೆಯ ಕನಕಪುರ ನಗರಸಭೆಯಲ್ಲಿನ 31 ವಾರ್ಡ್‌ಗಳ ಪೈಕಿ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ 24 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಇನ್ನುಳಿದಂತೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆ ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಪಟ್ಟಣ ಪಂಚಾಯತ್‌ನಲ್ಲಿ ತಲಾ ಒಂದು ವಾರ್ಡ್‌ನಲ್ಲಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವಿಎಂ ಬಳಕೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬಳಕೆ ಮಾಡುತ್ತಿದ್ದು, ಇವಿಎಂಗಳನ್ನು ಪರೀಕ್ಷಿಸಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಒಂದೇ ವಾರ್ಡ್‌ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಉಂಟಾಗುವ ಗೊಂದಲ ತಪ್ಪಿಸಲು ಇವಿಎಂಗಳಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಅಳವಡಿಸಲಾಗುತ್ತದೆ. ಈ ಚುನಾವಣೆಯಲ್ಲಿ ಮತದಾರರ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News