ಟಿಪ್ಪು ಜಯಂತಿ ರದ್ದುಗೊಳಿಸಲು ಕಾರಣವೇನು?: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ

Update: 2019-11-05 14:05 GMT

ಬೆಂಗಳೂರು, ನ.5: ಟಿಪ್ಪು ಸುಲ್ತಾನ್ ಜಯಂತಿಯನ್ನು ನಾಲ್ಕು ವರ್ಷದ ಬಳಿಕ ರದ್ದುಗೊಳಿಸಲು ಕಾರಣ ಏನು ಎಂಬುದನ್ನು ತಿಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಈ ಕುರಿತು ಉತ್ತರಪ್ರದೇಶದ ಲಖನೌ ನಿವಾಸಿ ಬಿಲಾಲ್ ಅಲಿ ಶಾ, ಟಿಪ್ಪು ರಾಷ್ಟ್ರೀಯ ಸೇವಾ ಸಂಘ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.      

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರು, ಹಿಂದಿನ ಸರಕಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಘೋಷಣೆ ಮಾಡಿತ್ತು. ಆದರೆ, ಮೊದಲ ವರ್ಷದ ಟಿಪ್ಪು ಸುಲ್ತಾನ್ ಜಯಂತಿಯಂದೇ ಕೋಮುಗಲಭೆ ಉಂಟಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಎರಡನೆ ವರ್ಷ ಪೊಲೀಸ್ ಭದ್ರತೆಯಲ್ಲಿ ಜಯಂತಿಯನ್ನು ಆಚರಿಸಬೇಕಾಯಿತು. ಹೀಗಾಗಿ, ಈ ಸರಕಾರ ಜಯಂತಿಯನ್ನು ರದ್ದುಗೊಳಿಸಿ ಆದೇಶಿಸಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ನಾಲ್ಕು ವರ್ಷದಿಂದ ನಡೆದುಕೊಂಡು ಬಂದಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಈ ವರ್ಷವೇ ಯಾಕೆ ನಿಲ್ಲಿಸಿದೀರಿ ಎಂಬ ಬಗ್ಗೆ ವಿವರವಾಗಿ ತಿಳಿಸಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿದ್ದಾರೆ. ಅಲ್ಲದೆ, ಸಂವಿಧಾನದ ಅನುಚ್ಛೇದ 14 ಮತ್ತು 15ಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News