×
Ad

ಚರಿತ್ರೆಯಿಂದ ಟಿಪ್ಪುವನ್ನು ಮರೆಮಾಚಲು ಸಾಧ್ಯವಿಲ್ಲ: ನ್ಯಾ.ಸಂತೋಷ್ ಹೆಗ್ಡೆ

Update: 2019-11-05 19:42 IST

ಬಳ್ಳಾರಿ, ನ.5: ರಾಜ್ಯ ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಬಗ್ಗೆ ತೆಗೆಯಬಹುದು. ಆದರೆ, ಚರಿತ್ರೆಯಿಂದ ಟಿಪ್ಪುವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಇಂದಿನ ಸರಕಾರಕ್ಕೆ ಟಿಪ್ಪು ದೇಶದ್ರೋಹಿ ಎಂಬ ಅಭಿಪ್ರಾಯವಿದೆ. ಅದಕ್ಕಾಗಿ ಪಠ್ಯಪುಸ್ತಕಗಳಿಂದ ಟಿಪ್ಪು ಇತಿಹಾಸ ತೆಗೆಯಲು ಮುಂದಾಗಿದ್ದಾರೆ. ಆದರೆ, ಚರಿತ್ರೆಯಿಂದ ಎಷ್ಟೇ ಪ್ರಯತ್ನಿಸಿದರೂ ಟಿಪ್ಪುವನ್ನು ಮರೆ ಮಾಚಲು ಸಾಧ್ಯವಾಗುವುದಿಲ್ಲ ಎಂದರು.

ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ಮೂವರು ಮುಖ್ಯಮಂತ್ರಿಗಳು, ಹಲವು ಸಚಿವರು, ನೂರಾರು ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದೇನೆ. ನಾನು ಪ್ರಾಮಾಣಿಕನಾಗಿ ಇರದೇ ಹೋಗಿದ್ದರೆ ಅವರೆಲ್ಲ ನನ್ನ ಬಟ್ಟೆ ಬಿಚ್ಚಿ ಬೀದಿಗೆ ಹಾಕುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಯಾಗುವ ಕಾಲವೂ ಬರುತ್ತದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮುಖ್ಯಮಂತ್ರಿ ಗಳಾಗಲೂಬಹುದು. ಮಹಾರಾಜರನ್ನು ಸಿಂಹಾಸನದಿಂದ ಇಳಿಸಿದ ಬಳಿಕ ಅದನ್ನು ತೆಗೆಯಲಿಲ್ಲ. ಏಕೆಂದರೆ ಎಲ್ಲರೂ ಈಗ ಅದರ ಮೇಲೆ ಕುಳಿತುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ನುಡಿದರು.

ಪ್ರಜಾಪ್ರಭುತ್ವದಲ್ಲಿ ಝೀರೋ ಟ್ರಾಫಿಕ್ ಎಂಬುದು ಅತ್ಯಂತ ನೀಚ ರೂಪ ಎಂದ ಅವರು, ಅದೊಂದು ಆಧುನಿಕ ಅಸ್ಪೃಶ್ಯತೆ. ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ನಮ್ಮ ಮಾಲಕರಲ್ಲ. ಅವರಿಗ್ಯಾಕೆ ಅಷ್ಟೊಂದು ಅವಸರ ಎಂದು ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರದಲ್ಲಿರುವವರ ಭ್ರಷ್ಟಾಚಾರದ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕು ಎಂಬ ನಿಯಮ ಜಾರಿಗೆ ಬರುತ್ತಿಲ್ಲ. ಇದು ಹೀಗೇ ಮುಂದುವರಿದರೆ ನ್ಯಾಯಾಂಗದ ಮೇಲೆ ಜನರ ವಿಶ್ವಾಸ ಕುಸಿಯುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದ ಇತಿಹಾಸವನ್ನು ಯಾವುದೇ ಸರಕಾರವಾದರೂ ತಮ್ಮ ನಿರ್ದಿಷ್ಟ ಸ್ವಾರ್ಥಕ್ಕಾಗಿ ಬದಲಿಸುವ ಕೆಲಸಕ್ಕೆ ಕೈ ಹಾಕಬಾರದು. ಒಬ್ಬ ವ್ಯಕ್ತಿಯ ಚರಿತ್ರೆಯನ್ನು ಅಷ್ಟು ಸುಲಭವಾಗಿ ಅಳಿಸಿ ಹಾಕಲು ಸಾಧ್ಯವಿರುವುದಿಲ್ಲ.

- ನ್ಯಾ.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News