ಕೊಡಗಿನ ವಿವಿಧೆಡೆ ಭೂಮಿಯೊಳಗಿಂದ ಶಬ್ಧ: ಗ್ರಾಮಸ್ಥರಲ್ಲಿ ಆತಂಕ

Update: 2019-11-05 17:55 GMT

ಮಡಿಕೇರಿ, ನ.5 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಮುಂಗಾರಿನ ಅವಧಿಯ ಭಾರೀ ಮಳೆ ಹಲವು ಸಂಕಷ್ಟಗಳನ್ನು ಉಂಟು ಮಾಡಿದ್ದರೆ, ಇದೀಗ ಮಳೆಯ ಪ್ರಮಾಣ ಕ್ಷೀಣಿಸುತ್ತಿರುವ ಹಂತದಲ್ಲೆ ಭಾಗಮಂಡಲ ಸಮೀಪದ ಪೇರೂರು ಗ್ರಾಮದಲ್ಲಿ ವಿಚಿತ್ರ ಶಬ್ದ ನೆಲದಾಳದಿಂದ ಕೇಳಿ ಬರುವ ಮೂಲಕ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.

ಬಲ್ಲಮಾವಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇರೂರು ಗ್ರಾಮದ ನೆಲದಾಳದಿಂದ ಕೇಳಿ ಬಂದ ಶಬ್ದದಿಂದ ಮತ್ತೆ ಅನಾಹುತಗಳು ಸಂಭವಿಸಬಹುದೇ ಎನ್ನುವ ಆತಂಕ ಮೂಡಿದೆ. ಇದೇ ರೀತಿಯ ಘಟನೆ ಅಯ್ಯಂಗೇರಿ ಗ್ರಾಮ ವ್ಯಾಪ್ತಿಯಲ್ಲೂ ಇತ್ತೀಚೆಗೆ ಸಂಭವಿಸಿತ್ತು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಂಟಾದ ಭೂಮಿಯ ಬಿರುಕುಗಳ ತಪಾಸಣೆಗೆಂದು ಆಗಮಿಸಿದ್ದ ಭೂ ವಿಜ್ಞಾನಿಗಳ ತಂಡ, ಕೊಡಗಿನಲ್ಲಿ ಭಾರೀ ಮಳೆಯಿಂದ ಈ ಎಲ್ಲಾ ವಿಕೋಪಗಳು ಸಂಭವಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

ವಾರ್ಷಿಕ ಸರಾಸರಿ ಮಳೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಅಂತರ್ಜಲ ಮಟ್ಟದಲ್ಲಿ ಗಣನೀಯ ಹೆಚ್ಚಳ ಉಂಟಾಗಿರುವುದು ಮತ್ತು ಭೂ ಗರ್ಭದಲ್ಲಿ ಭೂಮಿಯ ಪದರಗಳ ನಡುವೆ ಅತಿಯಾದ ಒತ್ತಡದೊಂದಿಗೆ ನೀರು ಹರಿಯುತ್ತಿರುವುದು ವಿಚಿತ್ರ ಶಬ್ದಗಳಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News