ಟಿಪ್ಪು ಪಠ್ಯ ಕೈಬಿಡುವ ವಿಚಾರದಿಂದ ಹಿಂದೆ ಸರಿಯದಿದ್ದರೆ ಉಗ್ರ ಪ್ರತಿಭಟನೆ: ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ

Update: 2019-11-05 18:18 GMT

ಮಂಡ್ಯ, ನ.5: ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ಕೈಬಿಡುವ ವಿಚಾರದಿಂದ ರಾಜ್ಯ ಸರಕಾರ ಹಿಂದೆ ಸರಿಯದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಉಪಚುನಾವಣೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಿಜೆಪಿ ಟಿಪ್ಪು ವಿಚಾರಕ್ಕೆ ಮರುಜೀವ ನೀಡಿದೆ ಎಂದು ಆರೋಪಿಸಿದರು.

ಮೈಸೂರು ಇತಿಹಾಸ ಓದುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಇತಿಹಾಸವನ್ನು ಬಿಟ್ಟು ಓದಲು ಸಾಧ್ಯವಿಲ್ಲ. ಇದನ್ನು ಬಿಜೆಪಿ ಅರಿಯಬೇಕು ಎಂದು ಅವರು ತಾಕೀತು ಮಾಡಿದರು.

ದೇಶ, ರಾಜ್ಯಕ್ಕೆ ಟಿಪ್ಪು ನೀಡಿರುವ ಕೊಡುಗೆಯನ್ನು ಇತಿಹಾಸದಿಂದ ಅಳಿಹಾಕಲು ಸಾಧ್ಯವೇ ಇಲ್ಲ. ಬ್ರಿಟೀಷರ ವಿರುದ್ಧ ಹೋರಾಡಿತ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ. ಆತ ಎಲ್ಲಾ ಧರ್ಮ, ವರ್ಗದ ಜನರ ಏಳಿಗೆಗೆ ಶ್ರಮಿಸಿದ್ದಾನೆ ಎಂದು ಅವರು ಹೇಳಿದರು.

ತನ್ನ ದೇಶ, ರಾಜ್ಯ ರಕ್ಷಣೆಗೆ ರಾಜನಾದವನು ಯುದ್ಧ ಮಾಡಬೇಕಾದ ಪರಿಸ್ಥಿತಿ ಸಾಮಾನ್ಯ. ಆ ಸಂದರ್ಭ ಅನೇಕ ಸಾವುನೋವು ಆಗಬಹುದು. ಇದನ್ನೇ ಮುಂದೆ ಮಾಡಿ ಆತ ಒಳ್ಳೆಯ ರಾಜನಲ್ಲ ಎಂದು ತೀರ್ಮಾನಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.

ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಹಲವಾರು ಹಿಂದೂ ದೇವಾಲಯ, ಮಠಮಾನ್ಯಗಳಿಗೆ ಉದಾರ ದೇಣಿಗೆ ನೀಡಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಆತ ಹಿಂದೂ, ಕ್ರೈಸ್ತರ ವಿರೋಧಿಯಾಗಿದ್ದ ಎಂಬುದಕ್ಕೆ ಖಚಿತ ಪುರಾವೆಗಳಿಲ್ಲ ಎಂದು ಅವರು ತಿಳಿಸಿದರು.

ಪಕ್ಷದ ಮುಖಂಡರಾದ ಎಂ.ಎಸ್.ವೆಂಕಟೇಶ್, ಎಸ್.ಶಿವಶಂಕರ್, ಎಂ.ಲಿಂಗರಾಮ್ಮ, ಪುರುಷೋತ್ತಮ ಹಾಗೂ ದಿನೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News