ಕನ್ನಡ, ಸಂಸ್ಕೃತಿ ಸಚಿವರಾಗಲು ಸಿ.ಟಿ.ರವಿಗೆ ಅರ್ಹತೆ ಇಲ್ಲ: ಎಚ್.ಎಚ್.ದೇವರಾಜ್ ಟೀಕೆ

Update: 2019-11-06 12:12 GMT

ಚಿಕ್ಕಮಗಳೂರು, ನ.6: ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಕನ್ನಡ ಧ್ವಜಾರೋಹಣ ಮಾಡದೇ ಕನ್ನಡ ಸಂಸ್ಕೃತಿಯವರಲ್ಲ ಎಂಬುದನ್ನು ಸಾಬಿತು ಮಾಡಿದ್ದಾರೆ. ಕನ್ನಡ ಧ್ವಜಕ್ಕೆ ಮಾನ್ಯತೆ ಇಲ್ಲ ಎನ್ನುವ ಸಿ.ಟಿ.ರವಿ ಚುನಾವಣೆಗೋಸ್ಕರ ಕೇಸರಿ ಬಾವುಟ ಹಿಡಿಯುತ್ತಾರೆ, ಕೇಸರಿ ಬಾವುಟಕ್ಕೆ ಮಾನ್ಯತೆ ನೀಡಿದವರು ಯಾರು? ಎಂಬುದನ್ನು ಸ್ಪಷ್ಟಪಡಿಸಬೇಕು. ಕನ್ನಡಿಗರ ಹಬ್ಬದಂದು ನಾಡಧ್ವಜ ಹಾರಿಸದೇ ಕನ್ನಡಿಗರಿಗೆ ದ್ರೋಹ ಬಗೆದ ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿರಲು ಯಾವುದೇ ಅರ್ಹತೆ ಇಲ್ಲ, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆಗ್ರಹಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ದಿನಾಚರಣೆ ಸಂದರ್ಭಲ್ಲಿ ಸಚಿವ ಸಿ.ಟಿ.ರವಿ ನಾಡಧ್ವಜಾರೋಹಣ ಮಾಡದೇ ಉದ್ಧಟತನ ಮೆರದಿದ್ದಾರೆಂದು ಆರೋಪಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ರಾಜಕೀಯ ಪಕ್ಷಗಳು, ದಲಿತ, ರೈತ, ಪ್ರಗತಿಪರ ಸಂಘಟನೆಗಳು ಬುಧವಾರ ನಗರದ ಆಝಾದ್ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಆರಂಭದಿಂದಲೂ ಏಕ ಭಾಷೆ, ಏಕ ಸಂಸ್ಕೃತಿ ನಿಲುವಿನ ಪರ ಹೇಳಿಕೆ ನೀಡುತ್ತಾ ದೇಶದ ವೈವಿಧ್ಯತೆಯನ್ನು ಕಡೆಗಣಿಸುತ್ತಿದ್ದಾರೆ. ಕನ್ನಡಿಗರಿಗೆ ಸ್ವಾಭಿಮಾನದ ಸಂಕೇತವಾಗಿರುವ ನಾಡಧ್ವಜಕ್ಕೆ ಮಾನ್ಯತೆ ಇಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಸಿ.ಟಿ.ರವಿಗೆ ಕನ್ನಡ ನಾಡಿನ ಇತಿಹಾಸದ ಬಗ್ಗೆ ಅರಿವಿದ್ದಂತಿಲ್ಲ. ಕನ್ನಡ ವಿಷಯ ಬಂದಾಗಲೆಲ್ಲ ಅವರು ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಿದ್ದು, ನಗರದಲ್ಲಿ ರಾಜ್ಯೋತ್ಸವ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಅವರು, ನಾಡಧ್ವಜಾರೋಹಣ ಮಾಡದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನೇ ಅವಮಾನಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಮುಖಂಡ ರೇಣುಕಾರಾಧ್ಯ ಮಾತನಾಡಿ, ಸಿ.ಟಿ.ರವಿ ಆರೆಸ್ಸೆಸ್ ಹಿನ್ನೆಲೆ ಇರುವ ರಾಜಕಾರಣಿ. ಆರೆಸ್ಸೆಸ್‌ಗೆ ಕನ್ನಡ ನಾಡಿನ ಗಂಧ ಗಾಳಿ ಗೊತ್ತಿಲ್ಲ. ಗೌರವವೂ ಇಲ್ಲ. ಆರೆಸ್ಸೆಸ್ ಈ ನೆಲದ ಸಂಘಟನೆಯಲ್ಲ, ಗಣರಾಜ್ಯ ವ್ಯವಸ್ಥೆಯಲ್ಲೂ ಅವರಿಗೆ ನಂಬಿಕೆ ಇಲ್ಲ. ಅದರಂತೆ ಸಿ.ಟಿ.ರವಿಗೆ ಕನ್ನಡದ ಬಗ್ಗೆ ಗೌರವ ಇರಲು ಸಾಧ್ಯವಿಲ್ಲ, ಕನ್ನಡ ನಾಡಿನ ನೆಲ ಜಲ, ಸಮಸ್ಯೆಗಳು, ಕನ್ನಡಿಗರ ಬದುಕಿನ ಬಗ್ಗೆ ಅರಿವಿಲ್ಲ ಎಂದ ಅವರು, ಮಂತ್ರಿಗಳಿಗೆ ಅಹಂಕಾರ ಇರುತ್ತದೆ, ಆದರೆ ಸಿ.ಟಿ.ರವಿಗೆ ದುರಹಂಕಾರವಿದೆ. ಇಂತಹ ಸಚಿವನನ್ನು ಜನರು ಮುಂದಿನ ದಿನಗಳಲ್ಲಿ ಮನೆಗೆ ಕಳಿಸಬೇಕಿದೆ ಎಂದರು.

ಬಿಎಸ್ಪಿ ಮುಖಂಡ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಸರಕಾರ ಕನ್ನಡ ಧ್ವಜಕ್ಕೆ ಶೀಘ್ರ ಮಾನ್ಯತೆ ನೀಡಬೇಕು. ರಾಜ್ಯೋತ್ಸವ ಕನ್ನಡಿಗರ ಹಬ್ಬವಾದ್ದರಿಂದ ಈ ಸಂದರ್ಭದಲ್ಲಿ ರಾಷ್ಟ್ರಧ್ವಜದೊಂದಿಗೆ ನಾಡಧ್ವಜವೂ ಹಾರಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದ ಅವರು, ರಾಜ್ಯೋತ್ಸವದ ದಿನಾಚರಣೆಯಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಕನ್ನಡಧ್ವಜಾರೋಹಣ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡದಿರಲು ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಕನ್ನಡ ಸಾಹಿತ್ಯ ಪರಿಷತ್ ಮುಖಂಡ ಹಿರೇಮಗಳೂರು ಪುಟ್ಟಸ್ವಾಮಿ, ಸಿಪಿಐ ನಾಯಕಿ ರಾಧಾಸುಂದರೇಶ್, ಜೆಡಿಎಸ್‌ನ ಹಣಸೇಮಕ್ಕಿ ಲಕ್ಷ್ಮಣ್, ಕನ್ನಡಸೇನೆಯ ರಾಜೇಗೌಡ, ರೈತ ಸಂಘದ ಪುಟ್ಟಸ್ವಾಮಿಗೌಡ ಮತ್ತಿತರರು ಮಾತನಾಡಿದರು.

ಧರಣಿಗೂ ಮುನ್ನ ನಗರದ ತಾಲೂಕು ಕಚೇರಿಯಿಂದ ಎಂಜಿ ರಸ್ತೆ ಮಾರ್ಗವಾಗಿ ಆಝಾದ್ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ರಘು, ನಿಂಗೇಗೌಡ, ರೈತ ಮುಖಂಡರಾದ ಕೃಷ್ಣೇಗೌಡ, ಗುರುಶಾಂತಪ್ಪ, ಚಂದ್ರೇಗೌಡ, ದಲಿತ ಸಂಘಟನೆಗಳ ಮುಖಂಡರಾದ ರಾಜರತ್ನಂ, ದಂಟರಮಕ್ಕಿ ಶ್ರೀನಿವಾಸ್, ಸಿಪಿಐ ಮುಖಂಡ ಬಿ.ಅಮ್ಝದ್ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News