×
Ad

ನಾವೇನು ಆಜನ್ಮ ಶತ್ರುಗಳೇ..: ಸಿಎಂ ಬಿಎಸ್‌ವೈ ಬಗ್ಗೆ ದೇವೇಗೌಡರ ಪ್ರತಿಕ್ರಿಯೆ

Update: 2019-11-06 18:00 IST

ಬೆಂಗಳೂರು, ನ. 6: ‘ಸಮಯ ಬಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ನಾನೇ ನೇರವಾಗಿ ಮಾತನಾಡುತ್ತೇನೆ. ಆದರೆ, ಇದೀಗ ನಾನು ಮಾತನಾಡಿದ್ದೇನೆಂಬುದರಲ್ಲಿ ಯಾವುದೇ ಹುರುಳಿಲ್ಲ’ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿ ಅಲ್ಲವೇ? ನಾವೇನು ಆಜನ್ಮ ಶತ್ರುಗಳೇ ಎಂದು ಪ್ರಶ್ನಿಸಿದರು. ಬೆಂಗಳೂರು ಬುಕ್ ಹೌಸ್ ಕಾರ್ಯಕ್ರಮಕ್ಕೆ ಸ್ಥಳ ಕೊಡಿಸುವ ಸಂಬಂಧ ಸಿಎಂ ಜತೆ ಮಾತನಾಡುವ ಪ್ರಯತ್ನ ಮಾಡಿದ್ದೆ. ಆದರೆ ಸಿಎಂ ಸಿಗಲಿಲ್ಲ. ಅವರ ಅಧಿಕಾರಿ ಜೊತೆ ಮಾತನಾಡಿದ್ದೆಯಷ್ಟೇ ಎಂದರು.

ಯಾವ ಸಂದರ್ಭದಲ್ಲಿ ಏನೇನಾಗುತ್ತದೋ ಗೊತ್ತಿಲ್ಲ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾವು ಒಂದೇ ವೇದಿಕೆಯಲ್ಲಿ ಭಾಷಣ ಮಾಡಿದ್ದೇವೆ. ಮಾಜಿ ಸಿಎಂ ದೇವರಾಜ ಅರಸು ಅವರ ಎತ್ತರಕ್ಕೆ ಬೆಳೆಯಲು ಆಗುವುದಿಲ್ಲ ಎಂದು ಹೇಳಿದರು.

ಉಪಚುನಾವಣೆ ಬಂದ ನಂತರ ಮತ್ತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ನ ನಿರ್ಧಾರವೇನು? ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಯಾವ ನಿರ್ಧಾರ ಕೈಗೊಳ್ಳುತ್ತವೆ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ ಎಂದರು.

‘ಯಾದಗಿರಿಯಲ್ಲಿ ಗುರುಮಿಠ್ಕಲ್ ಕ್ಷೇತ್ರದ ಜೆಡಿಎಸ್ ಮುಖಂಡನ ಮೇಲೆ ಹಲ್ಲೆ ಮಾಡಿದ್ದ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಂಡಿದ್ದು, ಸಿಎಂ ಯಡಿಯೂರಪ್ಪಗೆ ಧನ್ಯವಾದ ಹೇಳುವೆ. ಈ ಬಗ್ಗೆ ಪತ್ರ ಬರೆದು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದೆ. ಇದೀಗ ಕ್ರಮ ಕೈಗೊಂಡಿದ್ದು ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಬೀಗುವುದಿಲ್ಲ. ಪಕ್ಷದ ಕಾರ್ಯಕರ್ತರು ಕ್ಷೇತ್ರದಲ್ಲಿ ಶಾಂತಿ ಕಾಪಾಡಿಕೊಂಡು ಹೋಗಬೇಕು’
-ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News