5ಲಕ್ಷ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರಕ್ಕೆ ಕ್ರಮ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ನ.6: ಸರಕಾರಿ ಹಾಗೂ ಅನುದಾನಿತ ಶಾಲೆಗಳ ಸುಮಾರು 5ಲಕ್ಷ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ತ್ಯಾಗರಾಜ ಕೋ-ಅಪರೇಟಿವ್ ಬ್ಯಾಂಕ್ ವತಿಯಿಂದ ನಗರದ ಪತ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ಯಾಗರಾಜ ಬಾಲವಿಕಾಸ ಉಳಿತಾಯ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನ ಸಹಯೋಗದೊಂದಿಗೆ ಇಂದು ಪಾವಗಡದಲ್ಲಿ ಬೆಳಗಿನ ಉಪಾಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಈ ತಿಂಗಳ ಅಂತ್ಯದೊಳಗೆ ಐದು ಲಕ್ಷ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇತ್ತೀಚಿನ ಜಾಗತೀಕರಣ ಹಾಗೂ ಆಧುನೀಕರಣದ ಪರಿಣಾಮಗಳು ಸಮಾಜದಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಇದರಿಂದಾಗಿ ಅನಗತ್ಯ ವಸ್ತುಗಳನ್ನೆಲ್ಲಾ ಖರೀದಿಸುವಂತಹ ಗೀಳಿಗೆ ಬೀಳುತ್ತಿದ್ದೇವೆ. ಹೀಗಾಗಿ ಇಂದಿನ ಯುವ ಜನತೆ ಇಂತಹ ದುಂದುವೆಚ್ಚಗಳಿಂದ ದೂರವಾಗಿ ಉಳಿತಾಯದ ಮಹತ್ವವನ್ನು ಅರಿಯುವ ಅಗತ್ಯವಿದೆ ಎಂದು ಅವರು ಹೇಳಿದರು.
ತ್ಯಾಗರಾಜ ಕೋ-ಅಪರೇಟಿವ್ ಬ್ಯಾಂಕ್ ವತಿಯಿಂದ ಬಾಲವಿಕಾಸ ಉಳಿತಾಯ ಯೋಜನೆಯನ್ನು ಜಾರಿ ಮಾಡಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿ ದೆಸೆಯಿಂದಲೇ ಹಣದ ಮಹತ್ವ, ಉಳಿತಾಯದ ಜಾಣ್ಮೆ, ಜವಾಬ್ದಾರಿಯನ್ನು ಕಲಿಯಲು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಮಾತನಾಡಿ, ವಿದ್ಯಾರ್ಥಿಗಳು ಹಣ ಕೂಡಿಡುವುದೆಂದರೆ ಕೇವಲ ಹಣದ ಉಳಿತಾಯ ಮಾತ್ರವಲ್ಲ, ಅದೊಂದು ಆಟವಾಗಿ, ಲೆಕ್ಕದ ಪಾಠವಾಗಿ ಹಾಗೂ ಜವಾಬ್ದಾರಿಯ ವೌಲ್ಯವನ್ನು ಕಲಿಯುವಂತಹದ್ದಾಗಿದೆ. ಹೀಗಾಗಿ ಬಾಲವಿಕಾಸ ಉಳಿತಾಯ ಯೋಜನೆ ತೀರ ಅಗತ್ಯವಾದದ್ದೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಹಣವನ್ನು ಉಳಿತಾಯ ಮಾಡಬೇಕೆಂಬ ಒಂದೇ ಉದ್ದೇಶದಿಂದ ತಮ್ಮ ತಂದೆ, ತಾಯಿಗಳ ಬಳಿ ಹಣಕ್ಕಾಗಿ ಒತ್ತಾಯ ಮಾಡಬಾರದು. ತಮ್ಮ ಖರ್ಚಿಗೆ ಕೊಟ್ಟ ಹಣದಲ್ಲಿ ಸ್ವಲ್ಪ ಪ್ರಮಾಣವನ್ನು ಉಳಿತಾಯ ಮಾಡುವಂತಹ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ತ್ಯಾಗರಾಜ ಕೋ-ಅಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಆರ್.ವೆಂಕಟೇಶ್ ಮಾತನಾಡಿ, ಸರಕಾರಿ ಹಾಗೂ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗಾಗಿ ಬಾಲವಿಕಾಸ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈಗಾಗಲೇ ಈ ಯೋಜನೆಯಡಿ ಸುಮಾರು 2ಸಾವಿರ ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಇವರು ಬ್ಯಾಂಕ್‌ನಲ್ಲಿ ಕೂಡಿಟ್ಟ ಹಣಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿ ಕೊಡಲಾಗುವುದು ಎಂದು ತಿಳಿಸಿದರು.
ತ್ಯಾಗರಾಜ ಕೋ-ಅಪರೇಟಿಇವ್ ಬ್ಯಾಂಕ್‌ನಲ್ಲಿ ಹಣವನ್ನು ಕೂಡಿಡುವ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಯಾವುದೇ ಭದ್ರತೆಯಿಲ್ಲದೆ ಹಣಕಾಸಿನ ನೆರವನ್ನು ನೀಡಲಾಗುವುದು. ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಉಳಿತಾಯದ ಮಹತ್ವದ ಕುರಿತು ಆರ್ಥಿಕ ತಜ್ಞರಿಂದ ಉಪನ್ಯಾಸವನ್ನು ನಿರಂತರವಾಗಿ ಏರ್ಪಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ತ್ಯಾಗರಾಜ ಕೋ-ಅಪರೇಟಿವ್ ಬ್ಯಾಂಕ್ ಬಾಲವಿಕಾಸ ಉಳಿತಾಯ ಯೋಜನೆ ಜಾರಿ ಮಾಡಿ ವಿದ್ಯಾರ್ಥಿಗಳಲ್ಲಿ ಹಣದ ಉಳಿತಾಯದ ಕುರಿತು ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾದದ್ದಾಗಿದೆ. ಈ ಯೋಜನೆಯ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದ ಎಲ್ಲ ಶಾಲೆಗಳಲ್ಲೂ ಪ್ರಾರಂಭಿಸಲು ಚರ್ಚಿಸಲಾಗುವುದು.
-ಸುರೇಶ್ ಕುಮಾರ್, ಶಿಕ್ಷಣ ಸಚಿವ