ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ: ಸಚಿವ ಈಶ್ವರಪ್ಪ

Update: 2019-11-06 13:55 GMT

ದಾವಣಗೆರೆ: ಅಹಿಂದ ಅಲ್ಲ ಯಾವ ಸಮಾವೇಶ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಜಾತಿ ಒಡೆದು, ಟಿಪ್ಪು ಜಯಂತಿ ತಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡಿ, ಕಾಂಗ್ರೆಸ್ ಕೈಸುಟ್ಟುಕೊಂಡಿದೆ ಎಂದು ಅವರು ಟೀಕಿಸಿದರು. 

ಕೈಸುಟ್ಟುಕೊಂಡರೂ ಕಾಂಗ್ರೆಸ್ಸಿಗೆ, ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ. ತಾವೇ ರಚಿಸಿದ್ದ ಕಾಂತರಾಜ್ ಸಮಿತಿಯಿಂದ ಜಾತಿ ಗಣತಿ ಮಾಡಿದ್ದು, ಅದಕ್ಕೆ 188 ಕೋಟಿ ಖರ್ಚು ಮಾಡಿದ್ದಾರೆ. ಆದರೆ, ಆ ವರದಿಯನ್ನೇ ಬಿಡುಗಡೆ ಮಾಡಲಿಲ್ಲ. ಹಿಂದುಳಿದ ಆಯೋಗದ ವರದಿ ಬಿಡುಗಡೆಗೆ ಆಸಕ್ತಿಯೂ ಇಲ್ಲವೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. 

ಅಹಿಂದ ವರ್ಗವನ್ನು ಕಾಂಗ್ರೆಸ್ಸಿನವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಬಿಜೆಪಿ ಮಾತ್ರ ರಾಷ್ಟ್ರೀಯ ವಿಚಾರಗಳಿಗೆ ಮೊದಲಿನಿಂದಲೂ ಬದ್ಧವಾಗಿದೆ, ಬದ್ಧವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ, ರಾಷ್ಟ್ರ ವ್ಯಾಪಿಯಾಗಿ ಬೆಳೆಯುತ್ತಿದ್ದು, ಕಾಂಗ್ರೆಸ್ಸಿನ ಶಕ್ತಿ ದಿನೇದಿನ ಕುಗ್ಗುತ್ತಿದೆ. ಆದರೂ, ಸಿದ್ದರಾಮಯ್ಯ ಸಿಎಂ ಆಗುವ ತಿರುಕನಕನಸು ಕಂಡರೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ ಎಂದು ಅವರು ವ್ಯಂಗ್ಯವಾಡಿದರು. 

ಯಾವಾಗ ಚುನಾವಣೆ ನಡೆದರೂ ಬಿಜೆಪಿಯೇ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ ಸಂಪೂರ್ಣ ಬಹುಮತ ಬರದಿದ್ದರೂ, ಬಿಜೆಪಿಯೇ ಆಡಳಿತ ನಡೆಸಬೇಕೆಂಬ ವಾತಾವರಣವೂ ಸೃಷ್ಟಿಯಾಗಿದೆ ಎಂದು ಅವರು ತಿಳಿಸಿದರು. 

ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ಅದೇ ರೀತಿ ಶಾಸಕರ ಬೆಂಬಲವೂ ಇದೆ. ನಮ್ಮ ಸರ್ಕಾರಕ್ಕೆ ಬಾಹ್ಯ ಬೆಂಬಲದ ಅವಶ್ಯಕತೆ ಇಲ್ಲ. ಕೇಂದ್ರದಲ್ಲಿ ಬಹುಮತವಿದ್ದರೂ ಅನೇಕ ಪಕ್ಷಗಳು ಬೆಂಬಲ ನೀಡಿವೆ. ಅದೇ ರೀತಿ ಇಲ್ಲಿ ಯಾವುದೇ ಪಕ್ಷ, ನಾಯಕರು ಬೆಂಬಲ ನೀಡಿದರೂ ಬೇಡ ಎನ್ನುವುದಿಲ್ಲ. ನಮ್ಮ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲವೆಂದು ಸ್ವತಃ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿಯೇ ಹೇಳಿದ್ದಾರೆ ಎಂದು ಅವರು ವಿವರಿಸಿದರು. 

ಕಾಂಗ್ರೆಸ್-ಜೆಡಿಎಸ್ ಮಿತೃತ್ವ ಉಳಿಯಲಿಲ್ಲ. ಅದರ ಫಲವನ್ನು ಲೋಕಸಭೆ ಚುನಾವಣೆಯಲ್ಲೂ ಉಭಯ ಪಕ್ಷಗಳು ಅನುಭವಿಸಿವೆ. ನಮ್ಮ ಪಕ್ಷವನ್ನು ಅನೇಕ ಪಕ್ಷಗಳು ಸೇರುತ್ತಿದ್ದು, ಒಂದು ರೀತಿ ಬಿಜೆಪಿ ಸದೃಢವಾಗಿ ಬೆಳೆಯುತ್ತಿದೆ. ನಮ್ಮ ಸರ್ಕಾರವು ಬಾಕಿ ಅವದಿಯನ್ನೂ ಪೂರ್ಣಗೊಳಿಸಲಿದೆ ಎಂದು ಈಶ್ವರಪ್ಪ ಪುನರುಚ್ಛರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News