ಸಿ.ಟಿ.ರವಿ ವಿರುದ್ಧದ ಪ್ರತಿಭಟನೆ ತಡೆಗೆ ಮುಂದಾದ ಪೊಲೀಸರು: ಆರೋಪ

Update: 2019-11-06 16:15 GMT
ಕುಮಾರ್

ಚಿಕ್ಕಮಗಳೂರು, ನ.6: ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು, ದಲಿತ, ರೈತ, ಪ್ರಗತಿಪರ ಸಂಘಟನೆಗಳು ಬುಧವಾರ ನಗರದಲ್ಲಿ ಸಿ.ಟಿ.ರವಿ ವಿರುದ್ಧ ಹಮ್ಮಿಕೊಂಡಿದ್ದ ಧರಣಿಗೆ ಜಿಲ್ಲಾ ಪೊಲೀಸ್ ಇಲಾಖೆ ಆರಂಭದಲ್ಲಿ ಅನುಮತಿ ನೀಡದೇ ಸಿ.ಟಿ. ರವಿ ಪ್ರತಿಕೃತಿ ತಯಾರಿಸುತ್ತಿದ್ದ ಕುಶಲಕರ್ಮಿಯೊಬ್ಬರನ್ನು ಠಾಣೆಗೆ ಕರೆದೊಯ್ದು ಬೆದರಿಸಿದ್ದಾರೆಂದು ಆರೋಪಿಸಲಾಗಿದೆ.

ನ.1ರಂದು ಜಿಲ್ಲಾಡಳಿತ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಕನ್ನಡ ಧ್ವಜಾರೋಹಣ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ಬುಧವಾರ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಒಟ್ಟಾಗಿ ಸಿ.ಟಿ. ರವಿ ರಾಜೀನಾಮೆಗೆ ಆಗ್ರಹಿಸಿ ಧರಣಿ ಹಮ್ಮಿಕೊಂಡಿದ್ದವು.

ಧರಣಿ ಹಿನ್ನೆಲೆಯಲ್ಲಿ ಸಂಘಟನೆಯಗಳ ಮುಖಂಡರು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ತಿಳಿಸಿ, ಅನುಮತಿ, ಭದ್ರತೆ ಕೋರಿ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಆದರೆ ಪೊಲೀಸ್ ಇಲಾಖೆ ಸಂಘಟನೆಗಳ ಮುಖಂಡರಿಗೆ ತುರ್ತು ನೋಟಿಸ್ ನೀಡಿ, ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ನಿರಾಕರಿಸಲಾಗಿದೆ ಎಂದು ನೋಟಿಸ್ ನೀಡಿದ್ದರು. ಆದರೆ ಧರಣಿ ನಿರತರು ಈ ನೋಟಿಸ್‌ಗೆ ಜಗ್ಗದೆ ಧರಣಿ ನಡೆಸಿಯೇ ತೀರುವುದಾಗಿ ಪಟ್ಟು ಹಿಡಿದಿದ್ದರಿಂದ ಪೊಲೀಸರು ಕೊನೆಕ್ಷಣದಲ್ಲಿ ಧರಣಿಗೆ ಅನುಮತಿ ನೀಡಿದ್ದಾರೆಂದು ತಿಳಿದು ಬಂದಿದೆ.

ಪೊಲೀಸ್ ಇಲಾಖೆಯ ಈ ಕ್ರಮದ ವಿರುದ್ಧ ಧರಣಿ ನಿರತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಿ.ಟಿ.ರವಿ ಧರಣಿಯನ್ನು ಹತ್ತಿಕ್ಕಲು ಪ್ರಯತ್ನ ನಡೆಸಿದ್ದು, ತನ್ನ ಜನವಿರೋಧಿ ನಡೆ ಸಾರ್ವಜನಿಕರಿಗೆ ತಿಳಿಯುತ್ತದೆಂಬ ಉದ್ದೇಶದಿಂದ ಪೊಲೀಸರ ಮೂಲಕ ಹೋರಾಟಗಾರರನ್ನು ಹತ್ತಿಕ್ಕಲು ಮುಂದಾಗಿದ್ದಾರೆ. ಸಚಿವ ರವಿ ಅವರ ಇಂತಹ ಹುನ್ನಾರಗಳಿಗೆ ಹೋರಾಟಗಾರರು ಬಗ್ಗುವುದಿಲ್ಲ, ರವಿ ಅವರ ಜನವಿರೋದಿ ನಿಲುಗಳಿಗೆ ಹೋರಾಟದ ಮೂಲಕವೇ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದರು.

ಪೊಲೀಸ್ ಇಲಾಖೆ ಸಿ.ಟಿ.ರವಿ ಅವರ ವಿರುದ್ಧ ಬುಧವಾರ ಹಮ್ಮಿಕೊಂಡಿದ್ದ ಧರಣಿ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಖಂಡರಿಗೆ ತುರ್ತು ನೋಟಿಸ್ ನೀಡಿದ್ದಲ್ಲದೇ, ಸಿ.ಟಿ.ರವಿ ಅವರ ಪ್ರತಿಕೃತಿ ದಹನಕ್ಕೆಂದು ಸಂಘಟಕರು ಮುನ್ನೂರು ರೂ. ನೀಡಿ, ನಗರದ ಮಾರ್ಕೆಟ್ ರಸ್ತೆಯ ಕುಶಲಕರ್ಮಿ ಕುಮಾರ್ ಎಂಬವರ ಬಳಿ ಪ್ರತಿಕೃತಿ ಮಾಡಿಕೊಡಲು ಸೂಚಿಸಿದ್ದು, ಪೊಲೀಸರು ಪ್ರತಿಕೃತಿ ಮಾಡುತ್ತಿದ್ದ ಕುಮಾರ್‌ರನ್ನು ಠಾಣೆಗೆ ಕರೆದೊಯ್ದು ಬೆದರಿಕೆ, ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಘಟನೆ ಸಂಬಂಧ ಅವರು ಮಾಧ್ಯಮದರ ಬಳಿ ಅಳಲು ತೋಡಿಕೊಂಡಿದ್ದಾರೆ.

ಕನ್ನಡ ಪರಸಂಘಟಕರು ಸಿ.ಟಿ. ರವಿ ಅವರ ಪ್ರತಿಕೃತಿ ಮಾಡಿಕೊಡಲು ತಿಳಿಸಿದ್ದರು. ಅದರಂತೆ ಮುನ್ನೂರು ರೂ. ಗೆ ಪ್ರತಿಕೃತಿ ಮಾಡಲು ನಾನು ಒಪ್ಪಿದ್ದೆ. ನಗರದಲ್ಲಿ ಎಲ್ಲ ಪಕ್ಷದವರು, ಸಂಘಟನೆಗಳು ಪ್ರತಿಕೃತಿಗಳನ್ನು ಮಾಡಲು ಹೇಳಿದಾಗ ನಾನು ಮಾಡಿಕೊಡುತ್ತೇನೆ. ಇದೇ ನನ್ನ ಕೆಲಸ, ಇಂತಹ ಪ್ರತಿಕೃತಿಗಳಿಗೆ ಯಾವುದೇ ವ್ಯಕ್ತಿಯ ಭಾವಚಿತ್ರವನ್ನು ನಾನು ಹಾಕುವುದಿಲ್ಲ. ಈ ಹಿಂದೆಯೂ ಇಂತಹ ಪ್ರತಿಕೃತಿಗಳನ್ನು ನಾನು ಮಾಡಿದ್ದೇನೆ. ಆದರೆ ಬುಧವಾರ ನಗರಠಾಣೆಯ ಪೊಲೀಸರು ಏಕಾಏಕಿ ನನ್ನನ್ನು ಠಾಣೆಗೆ ಕರೆದೊಯ್ದಿದ್ದಲ್ಲದೇ ಪ್ರತಿಕೃತಿ ವಿಚಾರದಲ್ಲಿ ಹಲ್ಲೆಯನ್ನೂ ಮಾಡಿದ್ದಾರೆ. ಈ ಸಂಬಂಧ ಎಸ್ಪಿ ಅವರಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದೇನೆ.
ಕುಮಾರ್, ಕುಶಲಕರ್ಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News