ಫೆ.10 ರಿಂದ ಪ್ರಥಮ ಪಿಯುಸಿ ಪರೀಕ್ಷೆಗೆ ವಿರೋಧ: ಪರೀಕ್ಷೆಗಳನ್ನು ಮುಂದೂಡುವಂತೆ ಪೋಷಕರು, ವಿದ್ಯಾರ್ಥಿಗಳ ಮನವಿ

Update: 2019-11-06 17:17 GMT

ಬೆಂಗಳೂರು, ನ.6: ರಾಜ್ಯದಲ್ಲಿ ಎರಡು ಭಾರೀ ಭೀಕರ ನೆರೆಯಿಂದಾಗಿ ಉತ್ತರ ಕರ್ನಾಟಕದ ಭಾಗದಲ್ಲಿನ ಕಾಲೇಜುಗಳಲ್ಲಿ ಬೋಧನಾ ಅವಧಿ ನಷ್ಟವಾಗಿದೆ. ಆದರೂ, ಫೆ.10ರಿಂದ ಪ್ರಥಮ ಪಿಯುಸಿ ಪರೀಕ್ಷೆಗಳು ನಡೆಸಲು ಮುಂದಾಗಿರುವ ಪರೀಕ್ಷಾ ಮಂಡಳಿಯ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಪ್ರವಾಹದಿಂದಾಗಿ ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಮಕ್ಕಳ ಪುಸ್ತಕಗಳೆಲ್ಲವೂ ಅದರಲ್ಲಿಯೇ ಹೋಗಿವೆ. ಇಂತಹ ಸಂದರ್ಭದಲ್ಲಿ ಬೋಧನಾ ಅವಧಿ ಕಡಿಮೆ ಮಾಡಿ ಪರೀಕ್ಷೆಗಳು ನಡೆಸುವುದು ಸೂಕ್ತವಲ್ಲ ಎಂದು ಪೋಷಕರು ಮನವಿ ಮಾಡಿದ್ದಾರೆ.

ಪ್ರವಾಹದಿಂದಾಗಿ ಹಲವು ದಿನಗಳು ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಜನವರಿ ವೇಳೆಗೆ ಪಾಠ ಪ್ರವಚನಗಳು ಕೊನೆಗೊಳ್ಳುವುದು ಕಷ್ಟ. ಹೀಗಾಗಿ ಅವಸರದಲ್ಲಿ ಪರೀಕ್ಷೆ ಮಾಡುವುದು ಏಕೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿರುವಂತೆ ಫೆ.10ರಿಂದ 20ರವರೆಗೆ ಪ್ರಥಮ ಪಿಯು ಪರೀಕ್ಷೆಗಳು ನಡೆಯಲಿವೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಜನವರಿ ಮೊದಲ ವಾರದಿಂದಲೇ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತವೆ. ಅಂದರೆ ಡಿಸೆಂಬರ್ ವೇಳೆಗೇ ಬಹುತೇಕ ಪಠ್ಯವನ್ನು ಬೋಧಿಸಿ ಮುಗಿಸಬೇಕಾಗುತ್ತದೆ. ಈ ಬಾರಿ ಅದು ಬಹಳ ಕಷ್ಟ ಎಂದು ಕಾಲೇಜು ಪಾಂಶುಪಾಲರೊಬ್ಬರು ಹೇಳಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ಕೊನೆಗೊಂಡ ನಂತರವೂ ಪ್ರಥಮ ಪಿಯು ಪರೀಕ್ಷೆ ನಡೆಸಬಹುದಲ್ಲ ಎಂದು ಕೇಳುವ ಪೋಷಕರು, ಮಾರ್ಚ್ ಕೊನೆಯ ವಾರದಲ್ಲಿ ಪ್ರಥಮ ಪಿಯು ಪರೀಕ್ಷೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದು, ಎಸೆಸೆಲ್ಸಿ ಪರೀಕ್ಷೆ ಇದೇ ಸಮಯದಲ್ಲಿ ನಡೆದರೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳುತ್ತಾರೆ.

ಉತ್ತರ ಕರ್ನಾಟಕದ ಭಾಗಗಳಲ್ಲಿ ರವಿವಾರವೂ ತರಗತಿಗಳನ್ನು ನಡೆಸುತ್ತಿರುವುದರಿಂದ ಬೋಧನಾ ಅವಧಿಯನ್ನು ತಲುಪುವ ನಿರೀಕ್ಷೆಯಿದ್ದು, ಪಠ್ಯಗಳನ್ನು ಪೂರ್ಣಗೊಳಿಸಲಾಗುವುದು. ಪರೀಕ್ಷೆಗಳನ್ನು ಮುಂದೂಡುವಂತೆ ಇದುವರೆಗೂ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಯಾವುದೇ ಬೇಡಿಕೆ ಬಂದಿಲ್ಲ.
-ರಾಜಶೇಖರ ಪಟ್ಟಣಶೆಟ್ಟಿ, ಬೆಳಗಾವಿ ಜಿಲ್ಲೆಯ ಪ್ರಭಾರ ಡಿಡಿಪಿಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News