ವೈದ್ಯಕೀಯ ಶಿಕ್ಷಣ ಇಲಾಖೆ-ಆರೋಗ್ಯ ಇಲಾಖೆ ಪ್ರತ್ಯೇಕ ಬೇಡ: ಸಚಿವ ಶ್ರೀರಾಮುಲು

Update: 2019-11-06 17:24 GMT

ಬೆಂಗಳೂರು, ನ.6: ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇಂಡಿಯಾ-ಪಾಕಿಸ್ತಾನದಂತಿವೆ. ಹೀಗಾಗಿ, ಇವೆರಡನ್ನೂ ಒಂದೇ ಇಲಾಖೆ ಮಾಡಿ, ಒಬ್ಬರೇ ಸಚಿವರನ್ನಾಗಿ ಮಾಡುವುದು ಒಳಿತು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ವಿಭಾಗಗೊಳಿಸಿರುವುದರಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಹೊಂದಾಣಿಕೆ ಕೊರತೆ ಇದೆ. ರೋಗಿಗಳ ಸೇವೆ ಹಾಗೂ ಸೌಲಭ್ಯದಲ್ಲಿ ಮತ್ತು ಸಿಬ್ಬಂದಿಗಳ ವೇತನದಲ್ಲೂ ತಾರತಮ್ಯವಾಗುತ್ತಿದೆ ಎಂದರು.

ತಾರತಮ್ಯಕ್ಕೆ ಕೊನೆ ಹಾಡಲು ಎರಡು ಇಲಾಖೆಗಳು ಒಂದಾಗಬೇಕು. ವೈದ್ಯಕೀಯ ಶಿಕ್ಷಣ ಇಲಾಖೆ ಸಂಪದ್ಭರಿತವಾಗಿದೆ. ತನ್ನ ಸಿಬ್ಬಂದಿಗೆ ಹೆಚ್ಚಿನ ವೇತನ ನೀಡುತ್ತಿದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ಆ ಪ್ರಮಾಣದ ವೇತನ ಇಲ್ಲ. ಈ ತಾರತಮ್ಯ ಸಿಬ್ಬಂದಿ ಕಾರ್ಯದಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ರೋಗಿಗಳಿಗೂ ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯರಿಂದ ಕಸ ಗುಡಿಸಲು ಸಾಧ್ಯವಿಲ್ಲ. ಗುತ್ತಿಗೆ ಪಡೆದುಕೊಂಡವರು ಅದನ್ನು ಮಾಡಬೇಕು. ಅವರ ಮೇಲೆ ವೈದ್ಯರು ಕಣ್ಣಿಡಬೇಕು. ಕಾರ್ಪೋರೇಟ್ ಮಟ್ಟದಲ್ಲಿ ಹೊಸ ಟೆಂಡರ್ ಕರೆದು ಸ್ವಚ್ಛತಾ ವ್ಯವಸ್ಥೆ ಸುಧಾರಿಸುವ ಕೆಲಸ ಮಾಡಲಾಗುವುದು. ಗುತ್ತಿಗೆಯನ್ನು ರದ್ಧುಮಾಡಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದರು.

ಸರಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳ ಜೊತೆಗೆ ಸ್ಪರ್ಧೆ ಮಾಡುವಂತಾಗಬೇಕು. ಆಗ ಮಾತ್ರ ಈ ವ್ಯವಸ್ಥೆ ಸುಧಾರಣೆ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಗೂ ಒಬ್ಬ ಎಂಜಿನಿಯರ್ ನೇಮಕ ಮಾಡಲಾಗುವುದು. ಗುಡ್ಡಗಾಡು ಪ್ರದೇಶಗಳಲ್ಲಿ ಸೇವೆ ಮಾಡುವ ವೈದ್ಯರಿಗೆ ಇನ್ನು ಸಂಬಳ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News