ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ: ಎಸ್ಸೈ ಬಾಪುಗೌಡ ಪಾಟೀಲ್ ವರ್ಗಾವಣೆ

Update: 2019-11-06 17:26 GMT

ಬೆಂಗಳೂರು, ನ.6: ಯಾದಗಿರಿ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಸಬ್ ಇನ್‌ಸ್ಪೆಕ್ಟರ್ ಬಾಪುಗೌಡ ಪಾಟೀಲ್ ರನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿ ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಸೂಚಿಸಿದೆ.

ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಮಂಗಳವಾರ ಸುದ್ದಿಗೋಷ್ಠಿಯಲ್ಲಿ, ಸಬ್‌ಇನ್‌ಸ್ಪೆಕ್ಟರ್ ಬಾಪುಗೌಡ ಪಾಟೀಲ್ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರಕಾರ ಇಂದು ಬೆಳಗ್ಗೆ ಎಸ್ಸೈ ಬಾಪುಗೌಡ ಪಾಟೀಲ್‌ರನ್ನು ವರ್ಗಾವಣೆ ಮಾಡಿದೆ.

ವರ್ಗಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಜೆಡಿಎಸ್ ವರಿಷ್ಠ ದೇವೇಗೌಡರ ಸೂಚನೆಯಂತೆ ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಇನ್ನು ಮುಂದೆ ರಾಜಕೀಯ ಕಾರ್ಯಕರ್ತರ ಮೇಲೆ ಹಲ್ಲೆಗಳಾಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏನಿದು ಪ್ರಕರಣ: ಕೆಲ ದಿನಗಳ ಹಿಂದೆ ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಕಾರನ್ನು ತಡೆದು ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಇದಕ್ಕೆ ಸಂಬಂಧಿಸಿದಂತೆ ಯಾದಗಿರಿ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಕಂದಕೂರ ಮೇಲೆ ಎಸ್ಸೈ ಬಾಪುಗೌಡ ಪಾಟೀಲ್ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸ್ಸೈಯನ್ನು ಅಮಾನತು ಮಾಡಬೇಕೆಂದು ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News