ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ

Update: 2019-11-06 18:28 GMT

ದಾವಣಗೆರೆ, ನ.6: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ಕಚೇರಿಯಲ್ಲಿ ಮೀಲಾದುನ್ನಬಿ ಹಾಗೂ ಮಹಾನಗರಪಾಲಿಕೆ ಚುನಾವಣೆ ಹಿನ್ನೆಲೆ ಯಲ್ಲಿ ಏರ್ಪಡಿಸಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇನ್ನು 10ರಿಂದ 15 ದಿನಗಳಲ್ಲಿ ಪ್ರಮುಖ ಘಟನೆಗಳು ನಡೆಯುವದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ದಾವಣಗೆರೆ, ಚನ್ನಗಿರಿ ಮತ್ತು ಮಲೆಬೆನ್ನೂರಿನಲ್ಲಿ ಹಿಂದೆ ಶಾಂತಿ ಕದಡುವಂತಹ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಮುಂದೆ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲರೂ ಸಹಕರಿಸಬೇಕೆಂದರು.

ಎಸ್ಪಿ ಹನುಮಂತರಾಯ ಮಾತನಾಡಿ, ನ.10ರಂದು ಮೀಲಾದುನ್ನಬಿ, ನ.12ರಂದು ಮಹಾನಗರಪಾಲಿಕೆ ಚುನಾವಣೆ, ನ.14ರಂದು ಮತ ಎಣಿಕೆ ಹಾಗೂ ನ.17ರಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನಿವೃತ್ತಿ ಹೊಂದಲಿದ್ದು, ಅಂದು ಅಯೋಧ್ಯದ ಕುರಿತಾದ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಎಲ್ಲ ಧರ್ಮದ ಮುಖಂಡರು ತಮ್ಮ ಸಲಹೆಗಳನ್ನು ನೀಡಬಹುದೆಂದು ಹೇಳಿದರು.

ಪ್ರಗತಿಪರ ಹೋರಾಟಗಾರ ಡಿ.ಅಸ್ಲಂ ಖಾನ್ ಮಾತನಾಡಿ, ಮೀಲಾದುನ್ನಬಿ ರವಿವಾರ ಬಂದಿದ್ದು, ಅಂದು ಮಂಡಿಪೇಟೆಯಲ್ಲಿ ಸಂತೆ ನಡೆಯುತ್ತದೆ. ಮೆರವಣಿಗೆ ಚಾಮರಾಜಪೇಟೆಯಿಂದ ಮಂಡಿಪೇಟೆಗೆ ಬಂದಾಗ ಯಾವುದೇ ಅಡಚಣೆ ಆಗದಂತೆ ಸಂತೆಯ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ಹಿಂದೂ ಸಮಾಜದ ಮುಖಂಡ ಶಂಕರನಾರಾಯಣ ಮಾತನಾಡಿ, ಮೀಲಾದುನ್ನಬಿ, ಪಾಲಿಕೆ ಚುನಾವಣೆ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳು ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ಆಗದಂತೆ ಪೊಲೀಸ್ ಇಲಾಖೆ ಉತ್ತಮ ವ್ಯವಸ್ಥೆ ಮಾಡಿಕೊಳ್ಳಬೇಕು. ಅನಗತ್ಯವಾಗಿ ಗೊಂದಲಗಳನ್ನು ಸೃಷ್ಟಿಸುವ ಕಿಡಿಗೇಡಿಗಳನ್ನು ನಿಗ್ರಹಿಸಬೇಕು. ಮದ್ಯದಂಗಡಿಗಳನ್ನು ಬಂದ್ ಮಾಡಬೇಕು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಏನೇ ಇದ್ದರೂ ಎಲ್ಲ ಧರ್ಮವರು ಶಾಂತಿಯಿಂದ ಸ್ವೀಕರಿಸಬೇಕು ಎಂದರು.

ಪೌರ ಕಾರ್ಮಿಕರ ಸಂಘದ ಕಾರ್ಯದರ್ಶಿ ನೀಲಗಿರಿಯಪ್ಪ ಮಾತನಾಡಿ, ನಗರದಲ್ಲಿ ಆಝಾದ್ ನಗರ ಮತ್ತು ಗಾಂಧಿನಗರ ಹತ್ತಿರವಿದ್ದು ಇವು ಸೂಕ್ಷ್ಮ ಪ್ರದೇಶಗಳಾಗಿವೆ. ಆದ್ದರಿಂದ ಈ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕೆಂದು ಹೇಳಿದರು.

ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ಸಿಪಿಐ ಪ್ರಮುಖ ಆವರಗೆರೆ ಉಮೇಶ್ ಮಾತನಾಡಿದರು. ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು, ಎಎಸ್ಪಿ ರಾಜೀವ್, ಉಪ ವಿಭಾಗಾಧಿಕಾರಿ ಮಮತಾ, ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಗ್ರಾಮಾಂತರ ಡಿವೈಎಸ್ಪಿ ಗಂಗಲ್, ತಹಶೀಲ್ದಾರ್ ಸಂತೋಷ್ ಕುಮಾರ್, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News