ಜಾತಿಯಾಧಾರದಲ್ಲಿ ನೇಮಕಾತಿ ಜಾಹೀರಾತು ನೀಡಿದ್ದ ಗುತ್ತಿಗೆ ಸಂಸ್ಥೆಗೆ ರೈಲ್ವೆಯ ತರಾಟೆ

Update: 2019-11-07 15:56 GMT

ಹೊಸದಿಲ್ಲಿ,ನ.7: ತನ್ನ ನೇಮಕಾತಿ ಜಾಹೀರಾತಿನಲ್ಲಿ ನಿರ್ದಿಷ್ಟ ಜಾತಿಯನ್ನು ಉಲ್ಲೇಖಿಸಿದ್ದಕ್ಕಾಗಿ ರೈಲ್ವೆಯ ಗುತ್ತಿಗೆದಾರ ಕಂಪನಿಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಸದ್ರಿ ಕಂಪನಿಯನ್ನು ತೀವ್ರ ತರಾಟೆಗೆತ್ತಿ ಕೊಂಡಿದೆ.

ಕಂಪನಿಯು ಜಾಹೀರಾತನ್ನು ಪೋಸ್ಟ್ ಮಾಡಿದ್ದ ತನ್ನ ಮಾನವ ಸಂಪನ್ಮೂಲ ಅಧಿಕಾರಿಯನ್ನು ತೀವ್ರ ಛೀಮಾರಿಯ ಬಳಿಕ ಹುದ್ದೆಯಿಂದ ವಜಾಗೊಳಿಸಿದೆ ಎಂದು ಐಆರ್‌ಸಿಟಿಸಿ ಗುರುವಾರ ತಿಳಿಸಿದೆ. ಜಾತಿ ಆಧಾರದಲ್ಲಿ ನೇಮಕಾತಿಯಿಂದ ದೂರವಿರುವಂತೆ ಮತ್ತು ಯಾವುದೇ ಜಾತಿ/ಜನಾಂಗ/ಧರ್ಮ ಅಥವಾ ಪ್ರದೇಶಕ್ಕೆ ಸೇರಿದ ಅರ್ಹ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವಂತೆ ಕಂಪನಿಗೆ ನಿರ್ದೇಶ ನೀಡಲಾಗಿದೆ ಎಂದಿದೆ.

ಮೂರು ವಿಭಾಗಗಳಲ್ಲಿ 100 ಖಾಲಿ ಹುದ್ದೆಗಳ ಭರ್ತಿಗಾಗಿ ಜಾಹೀರಾತನ್ನು ಪ್ರಕಟಿಸಿದ್ದ ಬೃಂದಾವನ ಫುಡ್ ಪ್ರಾಡಕ್ಟ್ಸ್,ಅಭ್ಯರ್ಥಿಗಳು ಅಗರವಾಲ್ ವೈಶ್ಯ ಸಮುದಾಯಕ್ಕೆ ಸೇರಿದವರಾಗಿದ್ದು,ಉತ್ತಮ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರಬೇಕು,ಜೊತೆಗೆ ‘10+2’ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂದು ತಿಳಿಸಿತ್ತು.

ಜಾಹೀರಾತಿನ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದ ನೆಟ್ಟಿಗರು,ಹುದ್ದೆಗೆ ಅಭ್ಯರ್ಥಿ ನೇಮಕಾತಿಗಾಗಿ ಜಾತಿಯು ಮಾನದಂಡವಾಗಿರುವಂತಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News