ಹಾವೇರಿ ಜಿಲ್ಲೆಗೆ 100 ಕೋಟಿ ರೂ.ವಿಶೇಷ ಅನುದಾನ: ಮುಖ್ಯಮಂತ್ರಿ

Update: 2019-11-07 18:03 GMT

ಹಾವೇರಿ, ನ.7: ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ವಿವಿಧ ಇಲಾಖೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಅನುದಾನವನ್ನು ಹಾವೇರಿ ಜಿಲ್ಲೆಗೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಗುರುವಾರ ಹಾವೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಮತ್ತು ಪರಿಹಾರ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಮಳೆ- ಪ್ರವಾಹದಿಂದ ಹಾನಿಯಾದ ಎ ಮತ್ತು ಬಿ ಶ್ರೇಣಿಯ ಮನೆಗಳ ಪುನರ್ ನಿರ್ಮಾಣ ಕಾರ್ಯವನ್ನು ತತಕ್ಷಣದಿಂದಲೇ ಆರಂಭಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಸಮೀಕ್ಷೆ ಕಾರ್ಯದಲ್ಲಿ ಯಾವುದಾದರೂ ಸಂತ್ರಸ್ತರ ಮನೆಗಳು ಕೈಬಿಟ್ಟು ಹೋಗಿರುವ ಕುರಿತಂತೆ ಹಾಗೂ ಪರಿಹಾರ ದೊರಕಿಲ್ಲ ಎಂಬ ದೂರುಗಳು ಇವೆಯೇ, ಮೊದಲ ಕಂತಾಗಿ ಒಂದು ಲಕ್ಷ ರೂ. ಪರಿಹಾರ ಎ ಮತ್ತು ಬಿ ಕೆಟಗರಿ ಮನೆಗಳ ಫಲಾನುಭವಿಗಳಿಗೆ ಜಮಾ ಆಗಿದೆಯಾ ಎಂದು ಜಿಲ್ಲಾಧಿಕಾರಿಯನ್ನು ಮುಖ್ಯಮಂತ್ರಿ ಪ್ರಶ್ನಿಸಿದರು.

ಮೊದಲ ಕಂತಾಗಿ ಹಣ ಪಾವತಿಯಾಗಿದ್ದರೆ ತಕ್ಷಣದಿಂದಲೇ ಮನೆಗಳ ಫೌಂಡೇಷನ್ ಕಾರ್ಯ ಆರಂಭಿಸಬೇಕು. ಹಂತ ಹಂತವಾಗಿ ಐದು ಲಕ್ಷ ರೂ.ವರೆಗೆ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಬೆಳೆಹಾನಿ ಕುರಿತಂತೆ ಮಾಹಿತಿ ಪಡೆದ ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಹೊರತಾಗಿಯೂ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ.ವಿಶೇಷ ಅನುದಾನ ರಾಜ್ಯ ಸರಕಾರ ನೀಡುತ್ತಿರುವ ಕುರಿತಂತೆ ರೈತರಿಗೆ ಮಾಹಿತಿ ಇದೆಯಾ, ಬೆಳೆ ಪರಿಹಾರ ಕುರಿತಂತೆ ತೃಪ್ತಿ ಇದೆಯಾ, ಒಣಬೇಸಾಯ, ಮಳೆಯಾಶ್ರಿತ, ಪಂಪ್‌ಸೆಟ್ ಆಶ್ರಿತ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ವಿಶೇಷ 10 ಸಾವಿರ ರೂ.ಪರಿಹಾರ ನೀಡುತ್ತಿರುವ ಕುರಿತಂತೆ ಮನೆ ಮನೆಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ಎಲ್ಲ ರೈತರಿಗೂ ಮಾಹಿತಿ ರವಾನೆಯಾಗಬೇಕು. ಈ ಕುರಿತಂತೆ ವಿಶೇಷವಾಗಿ ಪ್ರಚಾರ ನಡೆಸಬೇಕು. ರೈತರಿಗೆ ಮಾಹಿತಿ ಗೊತ್ತಾಗಬೇಕು, ಎಲ್ಲ ರೈತರಿಗೂ ಹೆಚ್ಚುವರಿ ಪರಿಹಾರ ದೊರಕಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

ಸಭೆಯಲ್ಲಿ ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಶಾಲಾ ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ಬಿದ್ದುಹೋಗಿವೆ ಹಾಗೂ ಜಿಲ್ಲೆಯಲ್ಲಿ ರಸ್ತೆ, ಸೇತುವೆ, ಅಂಗನವಾಡಿ ಕಟ್ಟಡ ಸೇರಿದಂತೆ ಮೂಲ ಸೌಕರ್ಯಗಳು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದು ಹೆಚ್ಚುವರಿ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News