‘ಆಶಾ ಕಾರ್ಯಕರ್ತೆಯರ’ ಪ್ರೋತ್ಸಾಹ ಧನ ಒಂದೇ ಬಾರಿಗೆ ಬಿಡುಗಡೆ: ಸಚಿವ ಶ್ರೀರಾಮುಲು ಭರವಸೆ

Update: 2019-11-08 11:48 GMT

ಬೆಂಗಳೂರು, ನ. 8: ಆಶಾ ಕಾರ್ಯಕರ್ತೆಯರಿಗೆ ಹದಿನಾಲ್ಕು ತಿಂಗಳ ಬಾಕಿ ಇರುವ ಎಂಸಿಟಿಎಸ್ ಸೇವೆಗಳ ಪ್ರೋತ್ಸಾಹಧನ ಒಂದೇ ಬಾರಿಗೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಶ್ರೀರಾಮುಲು, ಇದೇ ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 6 ಸಾವಿರ ರೂ.ಒಂದೇ ಬಾರಿಗೆ ಗೌರವಧನ ನೀಡಲು ತೀರ್ಮಾನಿಸಲಾಗಿದೆ ಎಂದರು.

ಆಶಾ ಸಾಫ್ಟ್ ಆರ್‌ಸಿಎಚ್ ಪೋರ್ಟಲ್ ಸರಳ ಮಾಡಲಾಗುತ್ತಿದೆ. ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ-ಆಶಾಗಳ ಮಾರಣಾಂತಿಕ ಕಾಯಿಲೆ ಚಿಕಿತ್ಸೆಗೆ ಮತ್ತು ಐದು ವರ್ಷದಿಂದ ಜುಲೈ 2019 ಒಳಗೆ ಮರಣ ಹೊಂದಿದ ಆಶಾ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು. ಜೂನ್ 2019ರ ನಂತರದಲ್ಲಿ ಸಾವಿಗೀಡಾದ ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ವಿಮೆ ಮಾಡಿಸಿದ್ದಲ್ಲಿ ಆ ಕುಟುಂಬಕ್ಕೆ 3ಲಕ್ಷ ರೂ. ಸಿಗಲಿದೆ ಎಂದರು.

ಆಶಾ ಕಾರ್ಯಕರ್ತೆಯರಿಗೆ ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ ನೀಡಲಾಗುವುದು. ಪ್ರತಿ ವರ್ಷ ಆಶಾ ಕಾರ್ಯಕರ್ತೆಯರಿಗೆ ನಾಲ್ಕು ಜೊತೆ ಸಮವಸ್ತ್ರ(ಸೀರೆಗಳು) ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಹತ್ತು ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿ, ನಿವೃತ್ತಿ ಹೊಂದಲು ಬಯಸಿದ ಆಶಾ ಕಾರ್ಯಕರ್ತೆಯರಿಗೆ 20 ಸಾವಿರ ರೂ.ಪರಿಹಾರ ನೀಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ಡಾ. ಪ್ರಭಾಕರ್, ಯೋಜನಾ ನಿರ್ದೇಶಕ ಡಾ.ರಾಜ್‌ಕುಮಾರ್, ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ್ ಯಾದಗಿರಿ, ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, ರಮಾ ಹನುಮೇಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News