ಉಪಚುನಾವಣೆ ಮುಂದೂಡದಂತೆ ಸುಪ್ರೀಂ ಕೋರ್ಟ್‌ಗೆ ಮನವಿ: ದಿನೇಶ್ ಗುಂಡೂರಾವ್

Update: 2019-11-08 14:07 GMT

ಬೆಂಗಳೂರು, ನ. 8: ಚುನಾವಣಾ ಆಯೋಗ ಘೋಷಿಸಿರುವಂತೆ ಡಿಸೆಂಬರ್ 5ಕ್ಕೆ ಅನರ್ಹ ಶಾಸಕರು ಪ್ರತಿನಿಧಿಸುತ್ತಿದ್ದ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕ ಅರ್ಜಿ ವಿಚಾರಣೆ ವೇಳೆ ಉಪ ಚುನಾವಣೆ ಮುಂದೂಡಲು ಅನರ್ಹರ ಪರ ವಕೀಲರು ಮನವಿ ಮಾಡಿದ್ದಾರೆ. ಅದೇ ರೀತಿ ನಾವು (ಕಾಂಗ್ರೆಸ್) ಉಪಚುನಾವಣೆ ಮುಂದೂಡದಂತೆ ನಮ್ಮ ವಕೀಲರ ಮೂಲಕ ಕೋರುತ್ತೇವೆ ಎಂದರು.

ನ.13ಕ್ಕೆ ಅನರ್ಹ ಶಾಸಕರ ಪ್ರಕರಣ ಸಂಬಂಧ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಆ ಹಿನ್ನೆಲೆಯಲ್ಲಿ ನಾಳೆ(ನ.9) ಕೆಪಿಸಿಸಿ ಕಚೇರಿಯಲ್ಲಿ ಅನರ್ಹರ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದರು.

ಅಧಿಕಾರ ದಾಹ: ಅನರ್ಹ ಶಾಸಕರ ಕ್ಷೇತ್ರಗಳಿಗೆ ಸಿಎಂ ಬಿಎಸ್‌ವೈ ಹೆಚ್ಚಿನ ಅನುದಾನ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿದ್ದಾರೆ ಎಂದು ದೂರಿದ ಅವರು, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಲೇ ವಿಪಕ್ಷ ಶಾಸಕರ ವಿರುದ್ಧ ಹಗೆ ಸಾಧಿಸಲಾಗುತ್ತಿದೆ ಎಂದು ದೂರಿದರು.

ಯಡಿಯೂರಪ್ಪನವರಿಗೆ ಅಧಿಕಾರದ ದಾಹವಿದ್ದು, ಅವರಿಗೆ ಚುನಾವಣೆ ಗೆಲ್ಲುವುದು ಮತ್ತು ಅಧಿಕಾರದಲ್ಲಿರುವುದು ಮುಖ್ಯವಾಗಿದೆ. ಹೀಗಾಗಿ ಅನರ್ಹರ ಕ್ಷೇತ್ರಗಳಿಗೆ ನೆರೆ ಸಂತ್ರಸ್ತರಿಗಿಂತ ಆದ್ಯತೆ ನೀಡುತ್ತಿದ್ದಾರೆ. ಕೋಟ್ಯಂತರ ರೂ.ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅವಕಾಶ ದಕ್ಕದು: ಅನರ್ಹರು ಏನೇ ಮಾಡಿದರೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಸಿಗುವುದು ಅನುಮಾನ. ಕೋರ್ಟ್ ತೀರ್ಪು ಏನೇ ಬಂದರೂ ಸ್ವಾಗತಿಸುತ್ತೇವೆ. ಆದರೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ದಿನೇಶ್ ಗುಂಡೂರಾವ್‌ ಭವಿಷ್ಯ ನುಡಿದರು.

‘ಕೇಂದ್ರದ ನಾಯಕರಿಗೂ ಬಿಎಸ್‌ವೈ ಮೇಲೆ ವಿಶ್ವಾಸವಿಲ್ಲ. ಅನರ್ಹರ ಪರ ಓಲೈಕೆ ಬಿಟ್ಟರೆ ಅವರಿಗೆ ಬೇರೆ ದಾರಿಯಿಲ್ಲ. ಅನರ್ಹರ ಅಸಮಾಧಾನ ಶಮನ ಮಾಡಲು ಸಾಧ್ಯವಾಗುತ್ತಿಲ್ಲ. ಬಿಎಸ್‌ವೈಗೂ, ಅಮಿತ್ ಶಾಗೂ ಅಷ್ಟಕಷ್ಟೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಪ್ರತ್ಯೇಕ ತಂಡ ಕಟ್ಟಿಕೊಂಡಿರುವುದನ್ನು ಗಮನಿಸಿದರೆ ಮಧ್ಯಂತರ ಚುನಾವಣೆ ಸಾಧ್ಯತೆಗಳಿವೆ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News