ಅಮಿತ್ ಶಾ, ಬಿಎಸ್‌ವೈಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

Update: 2019-11-08 16:26 GMT

ಮೈಸೂರು,ನ.8: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಧಿಕಾರದಲ್ಲಿ ಮುಂದುರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಲು ರಾಷ್ಟ್ರಪತಿಯವರ ಬಳಿಗೆ ತೆರಳಲಿದ್ದೇವೆ. ಅವರು ಸಮಯ ನೀಡಿದ ನಂತರ ಅವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರವನ್ನು ವಜಾ ಗೊಳಿಸುವಂತೆ ಮನವಿ ಸಲ್ಲಿಸುವುದಾಗಿ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಹೊರಗೆ ಬಂದಿರುವುದು ನಿಮಗೆ ತಿಳಿದಿದೆ. ಅಮಿತ್ ಶಾ ಅವರೇ ಎರಡು ತಿಂಗಳು ಹದಿನೇಳು ಶಾಸಕರನ್ನು ಮುಂಬೈನಲ್ಲಿ ಇಟ್ಟುಕೊಂಡು ನೋಡಿಕೊಂಡಿದ್ದರು. ಪಕ್ಷಾಂತರಕ್ಕೆ ಅವರದೇ ಕುಮ್ಮಕ್ಕು, ಅವರ ಆದೇಶದ ಮೇಲೆ ಮಾಡಿದ್ದೇನೆ ಎಂದು ಯಡಿಯೂರಪ್ಪ ಅವರೇ ತಿಳಿಸಿದ್ದಾರೆ. ಹಾಗಾಗಿ ಇದೊಂದು ಅನೈತಿಕ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ, ಸಂವಿಧಾನಕ್ಕೆ ವಿರುದ್ಧವಾದ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಎರಡು ದಿನಗಳ ಮೈಸೂರು ಭೇಟಿಗೆ ಬೇರೆ ಆರ್ಥ ಕಲ್ಪಿಸುವುದು ಬೇಡ. ಅವರು ದೇಗುಲಗಳಿಗೆ ಭೇಟಿ ನೀಡಲು ಮೈಸೂರಿಗೆ ಬಂದಿದ್ದಾರೆ. ಈ ವೇಳೆ ಕಾಂಗ್ರೆಸ್ ಕಚೇರಿಗೂ ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ಬೇರೆ ಏನು ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News