ಐದು ವರ್ಷಗಳ ಹಿಂದಿನ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ

Update: 2019-11-08 17:41 GMT

ಮಡಿಕೇರಿ, ನ.8: ಐದು ವರ್ಷಗಳ ಹಿಂದೆ ವೀರಾಜಪೇಟೆಯ ಹೊಟೇಲ್‍ವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ನಗರದ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮೈತಾಡಿ ಗ್ರಾಮದ ಚಾಮಿಯಾಲದ ನಿವಾಸಿಗಳಾದ ಕುವಲೆರ ಯು.ಅನೀಶ್(29), ಕುವಲೆರ ಎ.ಮೂಸನ್(46) ಮತ್ತು ಪುದಿಯಾಣೆ ಎಂ.ನಝೀರ್ (36) ಎಂಬವರೆ ಜೀವಾವಧಿ ಶಕ್ಷೆಗೆ ಒಳಗಾದವರು.

2014ರ ಸೆ.17 ರಂದು ಮಧ್ಯಾಹ್ನ 3.30 ಗಂಟೆಗೆ ವೀರಾಜಪೇಟೆ ನಗರದ ಸಂಗಂ ಹೋಟೆಲ್‍ನಲ್ಲಿ ಚಾಮಿಯಾಲ ಗ್ರಾಮದ ಅನೀಶ್, ಮೂಸಾನ್, ನಾಸಿರ್, ಸೂಫಿ ಹಾಗೂ ಅಜ್‍ಮುದ್ದೀನ್ ಅವರು ಗುಂಪು ಕೂಡಿಕೊಂಡು ಚಾಮಿಯಾಲದ ನಿವಾಸಿ ಇಕ್ಬಾಲ್ ಹಸನ್(50) ರವರನ್ನು ಗುಂಡಿಕ್ಕಿ ಹತ್ಯೆಗೈದಿದ್ದು, ಈ ಸಂದರ್ಭ ಹೊಟೇಲ್‍ನಲ್ಲಿ ಊಟ ಮಾಡುತ್ತಿದ್ದ ಶಿವಕೇರಿಯ ನಿವಾಸಿ ಚಂದ್ರಶೇಖರ್ ಎಂಬವರ ಕಾಲಿಗೂ ಗುಂಡೇಟು ತಾಗಿ ಗಾಯವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿ ರೆಹಮತ್ ವಿರಾಜಪೇಟೆ ನಗರ ಠಾಣೆಗೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ವೀರಾಜಪೇಟೆ ನಗರ ಠಾಣಾ ಪೊಲೀಸರು ಇಂಡಿಯನ್ ಆರ್ಮ್ಸ್ ಆಕ್ಟ್ ಪ್ರಕಾರ ಮೊಕದ್ದಮೆ ದಾಖಲಿಸಿಕೊಂಡಿದ್ದರಲ್ಲದೆ, ಪೊಲೀಸ್ ಇನ್ಸ್ ಪೆಕ್ಟರ್ ಕೆ.ಆರ್.ಪ್ರಸಾದ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನಗರದ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪನ್ನು ನೀಡಿದ್ದು, ಅದರಂತೆ ಅನೀಶ್, ಮೂಸನ್ ಮತ್ತು ನಝೀರ್ ರಿಗೆ ಐಪಿಸಿ 302 ರ ಅನ್ವಯ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ದಂಡ, ಒಂದನೇ ಆರೋಪಿ ಅನೀಶ್‍ಗೆ ಐಪಿಸಿ 324ರ ಅನ್ವಯ 3 ವರ್ಷ ಸಜೆ ಮತ್ತು 5 ಸಾವಿರ ರೂ. ದಂಡ, 5ನೇ ಆರೋಪಿ ಉಸ್ಮಾನ್‍ಗೆ ಆರ್ಮ್ಸ್ ಆಕ್ಟ್ 30 ರ ಅಡಿ 5 ಸಾವಿರ ದಂಡ ವಿಧಿಸಿದ್ದು, 4ನೇ ಆರೋಪಿ ಅಜ್‍ಮುದ್ದೀನ್‍ನನ್ನು ಆರೋಪ ಮುಕ್ತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News