‘ಸುಪ್ರೀಂ’ ತೀರ್ಪಿನ ಬಗ್ಗೆ ನಾವು ಪೂರ್ಣ ತೃಪ್ತರಲ್ಲ: ಜಮಾಅತೆ ಇಸ್ಲಾಮಿ ಹಿಂದ್

Update: 2019-11-09 13:57 GMT

ಹೊಸದಿಲ್ಲಿ, ನ.9: ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಮಾತನಾಡಿರುವ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರಾಧ್ಯಕ್ಷ ಸೈಯದ್ ಸಾದತ್‌ಉಲ್ಲಾ ಹುಸೇನಿ, ಶಾಂತಿ ಮತ್ತು ಕೋಮು ಸೌಹಾರ್ದತೆ ಕಾಪಾಡುವಂತೆ ಭಾರತದ ಎಲ್ಲ ನಾಗರಿಕರಿಗೆ ಮನವಿ ಮಾಡಿದ್ದಾರೆ.

ಬಾಬರಿ ಮಸೀದಿ ಭೂ ವ್ಯಾಜ್ಯದ ಕುರಿತಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ನಾವು ಸಂಪೂರ್ಣವಾಗಿ ತೃಪ್ತರಾಗಿಲ್ಲ. ಆದರೆ, ತೀರ್ಪಿನ ಕೆಲವು ಅಂಶಗಳು ಬಹಳ ಮುಖ್ಯವಾಗಿದ್ದು, ಅವು ದೇಶದ ಸಂವಿಧಾನವನ್ನು ಬಲಪಡಿಸುವ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನೆರವಾಗುವಂತದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಹಾಗೆಯೇ, ತೀರ್ಪಿನ ಹಲವು ಅಂಶಗಳನ್ನು ನಾವು ಒಪ್ಪುವುದಿಲ್ಲ. ಮುಖ್ಯವಾಗಿ ತೀರ್ಪು ಕೊನೆಗೊಂಡ ರೀತಿಗೆ ನಮ್ಮ ತಕರಾರಿದೆ. ಕಾನೂನು-ನಿಯಮಗಳು ಅತ್ಯುನ್ನತ ಮಟ್ಟದಲ್ಲಿರುವ ಸುಸಂಸ್ಕೃತ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಏನನ್ನು ತೀರ್ಮಾನಿಸುತ್ತದೋ ಅದನ್ನು ನಾವು ಗೌರವಿಸುತ್ತೇವೆ ಮತ್ತು ಸ್ವೀಕರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಬಾಬರಿ ಮಸೀದಿಗೆ ಸಂಬಂಧಿಸಿ ಬಂದಿರುವ ಈ ತೀರ್ಪನ್ನು ನಮ್ಮ ವಕೀಲರು ಪರಿಶೀಲನೆ ನಡೆಸುತ್ತಿದ್ದು ಮೇಲ್ಮನವಿ ಸಲ್ಲಿಸಲು ಅವಕಾಶವಿದೆಯೇ ಎಂಬುದು ಮುಂದೆ ಗೊತ್ತಾಗಲಿದೆ. ಹಾಗೆಯೇ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಇತರ ಸದಸ್ಯರೊಂದಿಗೆ ಸಮಾಲೋಚಿಸಿ ನಾವು ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಾದತ್ ಉಲ್ಲಾ ಹುಸೇನಿ ಹೇಳಿದ್ದಾರೆ.

ಅಂತಿಮವಾಗಿ, ನಾವು ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದ ತೃಪ್ತರಾಗಿಲ್ಲ. ಆದರೆ ಸಾರ್ವಜನಿಕರು ಈ ತೀರ್ಪನ್ನು ಮತ್ತು ಕಾನೂನನ್ನು ಗೌರವಿಸಬೇಕು ಹಾಗೂ ಕೋಮು ಸೌಹಾರ್ದವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ. ತೀರ್ಪಿನಿಂದಾಗಿ ಸಮಾಜದಲ್ಲಿ ಕೋಮು ಧ್ರುವೀಕರಣ ಉಂಟಾಗಬಾರದು. ಈ ತೀರ್ಪು ಯಾವುದೇ ಪಕ್ಷದ ಗೆಲುವು ಅಥವಾ ಸೋಲು ಅಲ್ಲ ಎಂದು ಸಾದತ್ ಉಲ್ಲಾ ಹುಸೇನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News