ಮೀಲಾದುನ್ನಬಿ ಹಿನ್ನೆಲೆ: ರಾಜ್ಯದೆಲ್ಲೆಡೆ ಕಟ್ಟೆಚ್ಚರ

Update: 2019-11-09 14:27 GMT

ಬೆಂಗಳೂರು, ನ.9: ರಾಮಜನ್ಮ ಭೂಮಿ ಮತ್ತು ಬಾಬರಿ ಮಸೀದಿ ಭೂ ವಿವಾದ ಸಂಬಂಧ ತೀರ್ಪು ಪ್ರಕಟ ಮತ್ತು ಮೀಲಾದುನ್ನಬಿ ಹಿನ್ನೆಲೆ ರವಿವಾರವೂ ಸಹ ರಾಜ್ಯದ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ರಾಜಧಾನಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಸೇರಿದಂತೆ ಪ್ರಮುಖ ನಗರ, ಪಟ್ಟಣಗಳಲ್ಲದೇ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಮುಂದುವರೆಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೆಲ ಪ್ರದೇಶಗಳಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.

ದೇವಸ್ಥಾನ, ಮಸೀದಿ ಇನ್ನಿತರ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲ್ಬುರ್ಗಿಗಳಲ್ಲಿ ಪೊಲೀಸ್ ಆಯುಕ್ತರು ಜಿಲ್ಲೆಗಳ ಪೊಲೀಸ್ ವರಿಷ್ಠರು ಭದ್ರತೆಯ ನಿಗಾವಹಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಶನಿವಾರ ರಾಜಧಾನಿ ಬೆಂಗಳೂರಿನ ಭದ್ರತೆಗಾಗಿ 50 ಕೆಎಸ್‌ಆರ್‌ಪಿ ತುಕಡಿ, 30 ನಗರ ಸಶಸ್ತ್ರ ಮೀಸಲು ಪಡೆ, 1 ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್) ತುಕಡಿ, 1,200 ಗೃಹರಕ್ಷಕರು, 250 ಪೌರ ರಕ್ಷಕರು, 8 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ಪೋಸ್ಟ್‌ಗಳನ್ನು, ಕಮೆಂಟ್‌ಗಳನ್ನು ಹಾಕುವವರ ಮೇಲೂ ನಿಗಾವಹಿಸಲಾಗಿದೆ. ಯಾವುದೇ ರಾಜಕೀಯ ಹಾಗೂ ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು, ರವಾನಿಸುವುದು, ಅಪರಾಧವಾಗಿದ್ದು ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಮರ್ ಕುಮಾರ್ ಪಾಂಡೆ ಎಚ್ಚರಿಕೆ ನೀಡಿದ್ದಾರೆ.

ಎಂದಿನಂತಿದ್ದ ಶನಿವಾರ

ಮಹತ್ವದ್ದ ತೀರ್ಪು ಪ್ರಕಟಗೊಂಡ ಬಳಿಕವೂ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಹಿವಾಟು ಎಂದಿನಂತೆ ಸಾಗಿತ್ತು. ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಖರೀದಿ ಭರಾಟೆಯೂ ಜೋರಾಗಿತ್ತು. ಉರಿ ಬಿಸಿಲನ್ನೂ ಲೆಕ್ಕಿಸದೆ ಜನ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ದೃಶ್ಯ ಶನಿವಾರ ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News