ಕೊಡವರ ಸಾಧನೆ ಪಠ್ಯ ಪುಸ್ತಕದಲ್ಲಿ ದಾಖಲಿಸಲು ಕ್ರಮ: ಯಡಿಯೂರಪ್ಪ

Update: 2019-11-09 16:00 GMT

ಬೆಂಗಳೂರು, ನ.9: ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಹುತಾತ್ಮರಾದ ಕೊಡಗಿನ ಸುಬೇದರ್ ಗುಡ್ಡೆಮನೆ ಅಪ್ಪಯ್ಯ ಗೌಡ, ಕೆದಂಬಾಡಿ ರಾಮೇಗೌಡರ ಚರಿತ್ರೆಯನ್ನು ಪಠ್ಯ ಪುಸ್ತಕಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಏರ್ಪಡಿಸಿದ್ದ, ‘ಅಮರ ಸುಳ್ಯ ಸಮರ-1837’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

1837ನೆ ಸಾಲಿನಲ್ಲಿ ಅಮರಸುಳ್ಯ ಸಮರ ಎಂದೇ ಪ್ರಸಿದ್ಧವಾದ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಅಪ್ಪಯ್ಯಗೌಡ, ರಾಮೇಗೌಡರು ಹುತಾತ್ಮರಾಗಿದ್ದಾರೆ. ಇವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಬಿದರೂರಿನ ದೊರೆಗಳು ಸೇರಿದಂತೆ ಅನೇಕ ಕನ್ನಡಿಗರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಇವರೊಂದಿಗೆ ಅಪ್ಪಯ್ಯ ಗೌಡ, ಕೆದಂಬಾಡಿ ರಾಮೇಗೌಡರು ಜನ ಸಂಘಟನೆ ಮಾಡಿ, ಹೋರಾಟ ಮಾಡಿದರು ಎಂದರು.

ಮಡಿಕೇರಿ, ಸುಳ್ಯವನ್ನು ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸುವ ಯತ್ನ ನಡೆಯಿತು. ಅದರ ವಿರುದ್ಧ ರೈತರು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಅದೇ ರೀತಿ, ಉಪ್ಪು, ತಂಬಾಕು ಉತ್ಪನ್ನಗಳ ಮೇಲೆ ಬ್ರಿಟಿಷರು ಸುಂಕ ವಿಧಿಸುವ ಕೆಲಸ ಮಾಡಿದಾಗ ಇದರ ವಿರುದ್ಧ ಅನೇಕರು ಹೋರಾಟ ನಡೆಸಿದರು. ಇಂತಹ ವಿಷಯಗಳು ಚರಿತ್ರೆಯ ಪುಟ ಸೇರಬೇಕು ಎಂದು ಯಡಿಯೂರಪ್ಪ ಹೇಳಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ವಾಸ್ತವವಾಗಿ ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶಕ್ಕಾಗಿ ಬಲಿದಾನವಾದ ವ್ಯಕ್ತಿಗಳನ್ನು ಸ್ಮರಿಸುತ್ತಾರೆ. ಆದರೆ, ಅವರ ಆಶಯಗಳನ್ನು, ವಿಚಾರಧಾರೆಗಳನ್ನು ಜೊತೆಯಲ್ಲಿ ಕರೆದೊಯ್ಯುವ ಕೆಲಸ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಸಚಿವ ಆರ್.ಅಶೋಕ್ ಸಂಸದೆ ಶೋಭಾ ಕರಂದ್ಲಾಜೆ, ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News