ದನಗಳನ್ನು ಓಡಿಸಲು ಹೋದ ಬಾಲಕ ಜಮೀನಿನಲ್ಲಿದ್ದ ಕೆರೆಗೆ ಬಿದ್ದು ಮೃತ್ಯು

Update: 2019-11-09 17:00 GMT

ಚಿಕ್ಕಮಗಳೂರು, ನ.9: ದನಗಳನ್ನು ಓಡಿಸಲು ಹೋಗಿ ಜಮೀನಿನಲ್ಲಿದ್ದ ಕೆರೆಗೆ ಬಿದ್ದು ಶಾಲಾ ಬಾಲಕನೋರ್ವ ಮೃತಪಟ್ಟಿರುವ ಘಟನೆ ಶನಿವಾರ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಕೊಪ್ಪ ತಾಲೂಕಿನ ತೆಂಗಿನಮನೆ ಗ್ರಾಮದ ಸಾಗರ್(15) ಮೃತ ಬಾಲಕನಾಗಿದ್ದು, ಶನಿವಾರ ಮಧ್ಯಾಹ್ನದ ವೇಳೆ ಜಮೀನಿಗೆ ಬಂದಿದ್ದ ದನಗಳನ್ನು ಓಡಿಸಲು ಸಹೋದರನೊಂದಿಗೆ ಹೋಗಿದ್ದ ಈತ ಜಮೀನಿನಲ್ಲಿದ್ದ ಕೆರೆ ದಂಡೆಯ ಮೇಲೆ ಓಡುವ ಸಂದರ್ಭದಲ್ಲಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದಿದ್ದಾನೆಂದು ತಿಳಿದು ಬಂದಿದೆ.

ಕೆರೆ ಭಾರೀ ಆಳವಿದ್ದು, ಭಾರೀ ನೀರು ಶೇಖರಣೆಯಾಗಿದ್ದರಿಂದ ಈಜಲು ಬಾರದ ಸಾಗರ್ ನೀರಿನಲ್ಲಿ ಮುಳುಗಿದ್ದಾನೆ. ಸಾಗರ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಮತ್ತೋರ್ವ ಬಾಲಕ ಕೂಡಲೇ ಮನೆಮಂದಿಗೆ ಸುದ್ದಿ ಮುಟ್ಟಿಸಿದ್ದಾನೆ. ಮನೆಯವರು ಬರುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

ಬಾಲಕ ಸಾಗರ್ ಕೊಪ್ಪ ಸಮೀಪದ ನಾರ್ವೆ ಗ್ರಾಮದ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲೇ ಇದ್ದ. ಮಧ್ಯಾಹ್ನದ ವೇಳೆ ದನಗಳನ್ನು ಓಡಿಸಲು ಹೋಗಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಜಯಪುರ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News