ಅಯೋಧ್ಯೆ ತೀರ್ಪು: ಚಿಕ್ಕಮಗಳೂರಿನಲ್ಲಿ ಸಣ್ಣ ಅಹಿತಕರ ಘಟನೆಯೂ ಸಂಭವಿಸಿಲ್ಲ- ಎಸ್ಪಿ

Update: 2019-11-09 17:15 GMT

ಚಿಕ್ಕಮಗಳೂರು, ನ.9: ಜಿಲ್ಲೆಯಾದ್ಯಂತ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10ರಿಂದ ರವಿವಾರ ಬೆಳಗ್ಗೆ 6 ಗಂಟೆಯವರೆಗೆ 144ನೇ ವಿಧಿಯನ್ನು ಜಿಲ್ಲಾಡಳಿತ ಜಾರಿಗೊಳಿಸಿದ್ದು, ಜಿಲ್ಲೆಯಾದ್ಯಂತ ತೀರ್ಪು ಹೊರಬಂದ ನಂತರವೂ ಯಾವುದೇ ರೀತಿಯ ಸಣ್ಣ ಅಹಿತಕರ ಘಟನೆಗಳೂ ನಡೆದಿಲ್ಲ. ಜನ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿದ್ದಾರೆಂದು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ರಾತ್ರಿ ಪರಿಸ್ಥಿತಿಯನ್ನು ಅವಲೋಕಿಸಿ 144ನೇ ವಿಧಿಯನ್ನು ಮತ್ತೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕೆಎಸ್‍ಆರ್‍ಪಿ, ಗೃಹರಕ್ಷಕ ದಳ ಹಾಗೂ ಸಿವಿಲ್ ಪೊಲೀಸರನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದರು.

ತೀರ್ಪು ಬರುವ ನಿರೀಕ್ಷೆಯಲ್ಲಿದ್ದ ಕಾರಣ ಜಿಲ್ಲೆಯ ಸೂಕ್ಷ್ಮ ಪ್ರದೇಶ, ಜನ ಸೇರುವ ಹಾಗೂ ಸಭೆ ಸಮಾರಂಭಗಳು ನಡೆಯುವ ಪ್ರದೇಶಗಳನ್ನು ಗುರುತಿಸಿದ್ದು, ಆ ಎಲ್ಲಾ ಪ್ರದೇಶಗಳಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ. 144ನೆ ವಿಧಿ ಜಾರಿಗೊಳಿಸಿರುವುದರಿಂದ ಸಭೆ, ಮೆರವಣಿಗೆ, ಶಸ್ತ್ರ ಹಿಡಿದು ತಿರುಗಾಡುವುದನ್ನು ಹಾಗೂ ಗುಂಪು ಕಟ್ಟಿಕೊಂಡು ಓಡಾಡುವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಈ ಬಾರಿ ಪೊಲೀಸ್ ಇಲಾಖೆ ಎಲ್ಲಾ ಜನಾಂಗದ ಮುಖಂಡರುಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಇನ್ನಿತರ ಸಂವಹನ ಮಾರ್ಗಗಳ ಮೂಲಕ ಶಾಂತಿ ಕಾಪಾಡಲು ಮನವಿ ಮಾಡಿತ್ತು. ಶಾಂತಿ ಭಂಗ ಮಾಡುವ ವ್ಯಕ್ತಿಗಳನ್ನು ಗುರುತಿಸಲಾಗಿದೆ, ಆದರೆ ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದ ಅವರು, ಫೇಸ್‍ಬುಕ್‍ನಲ್ಲಿ ಯಾವುದೇ ರೀತಿಯ ಆತಂಕಕಾರಿ ಹಾಗೂ ಉದ್ರೇಕಕಾರಿ ಸಂದೇಶ ಕಳುಹಿಸುವುದು, ಭಾವನೆಗಳಿಗೆ ಧಕ್ಕೆ ತರುವ ವ್ಯಂಗ್ಯ ಚಿತ್ರಗಳನ್ನು ಬಳಸಿದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ತೀರ್ಮಾನಿಸಿದ್ದು, ಈ ರೀತಿಯ ಪ್ರಕರಣಗಳನ್ನು ಅತ್ಯಂತ ತೀವ್ರ ಅಪರಾಧ ಕೃತ್ಯವೆಂದು ಭಾವಿಸಿದೆ ಎಂದರು.

ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ನ.10ರಂದು ನಡೆಯುವ ಈದ್ ಮಿಲಾದ್ ಮೆರವಣಿಗೆಗೆ ಈವರೆಗೂ ಯಾವುದೇ ರೀತಿಯ ನಿರ್ಭಂಧವನ್ನು ವಿಧಿಸಿಲ್ಲ. ಶನಿವಾರ ರಾತ್ರಿ ಪರಿಸ್ಥಿತಿ ಅವಲೋಕಿಸಿ ಯಾವುದೇ ರೀತಿ ಗಲಭೆ ಅಥವಾ ಅಶಾಂತಿ ಸಂಭವಿಸುವ ಮುನ್ಸೂಚನೆ ಸಿಕ್ಕಲ್ಲಿ ಆನಂತರ ಬೇರೆ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ. ಪರಿಸ್ಥಿತಿ ಅವಲೋಕಿಸಿದಾಗ ಶಾಂತಿ ಕದಡುವ ಯಾವುದೇ ಸೂಚನೆ ಇದುವರೆಗೂ ಕಂಡು ಬಂದಿಲ್ಲ ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದರು.

ಅಯೋಧ್ಯೆ ವಿವಾದ ಸಂಬಂಧ ಶನಿವಾರ ತೀರ್ಪು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ದೇವಸ್ಥಾನಗಳು, ಮಸೀದಿ ಸೇರಿದಂತೆ ಧಾರ್ಮಿಕ ಸ್ಥಳಗಳೂ ಸೇರಿದಂತೆ ಬಿಜೆಪಿ ಕಚೇರಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯಗಳಿಗೂ ಶನಿವಾರ ಬೆಳಗಿನಿಂದಲೇ ಭದ್ರತೆ ಒದಗಿಸಲಾಗಿದೆ. ಈ ಭದ್ರತಾ ವ್ಯವಸ್ಥೆ ನ.12ರವರೆಗೂ ಮುಂದುವರಿಯುವ ಸಂಭವವಿದೆ. ಶನಿವಾರ ಸಂಜೆವರೆಗೆ ಯಾವುದೇ ಅಹಿತಕರ ಘಟನೆಗಳು ಜಿಲ್ಲೆಯಲ್ಲಿ ನಡೆದಿಲ್ಲ.
- ಹರೀಶ್ ಪಾಂಡೆ, ಎಸ್ಪಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News