ಅಯೋಧ್ಯೆ ತೀರ್ಪು: ಕೊಡಗಿನಲ್ಲಿ ಮುಂದುವರಿದ ಪೊಲೀಸ್ ಬಂದೋಬಸ್ತ್

Update: 2019-11-09 17:28 GMT

ಮಡಿಕೇರಿ, ನ.9: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕೊಡಗು ಜಿಲ್ಲೆ ಅತ್ಯಂತ ಶಾಂತಿ ಮತ್ತು ಸಹನೆಯಿಂದ ಸ್ವೀಕರಿಸಿದ್ದು, ಜಿಲ್ಲೆಯಲ್ಲಿ ದಿನ ನಿತ್ಯದ ಚಟುವಟಿಕೆಗಳು ಎಂದಿನಂತೆ ನಡೆದವು. ಜಿಲ್ಲೆ ಪ್ರಶಾಂತವಾಗಿದ್ದರೂ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾ ವ್ಯಾಪ್ತಿಯ ಕೆಲ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸುಮಾರು 400ಕ್ಕೂ ಹೆಚ್ಚಿನ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿತ್ತು. ಇದರೊಂದಿಗೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಿಸಿದ್ದು ಮತ್ತು ಎರಡನೇ ಶನಿವಾರದ ಹಿನ್ನೆಲೆ ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿದ್ದರಿಂದ ಪಟ್ಟಣ ಪ್ರದೇಶಗಳಲ್ಲಿ ಜನಸಂದಣಿ ವಿರಳವಾಗಿತ್ತು.

ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇದಾಜ್ಞೆಯನ್ನು ವಿಧಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಿಸಲಾಗಿತ್ತು. ಸುಮಾರು 14 ಚೆಕ್‍ಪೋಸ್ಟ್ ಗಳಲ್ಲಿ ಪೊಲೀಸರು ನಿಗಾ ವಹಿಸಿದ್ದರು. ನಗರ ವ್ಯಾಪ್ತಿಯಲ್ಲಿ ಜನ ಸಂಚಾರ ಮತ್ತು ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯಿತು.

ಅಯೋಧ್ಯೆ ತೀರ್ಪಿನ ಬಗ್ಗೆ ಅಲ್ಲಲ್ಲಿ ಆರೋಗ್ಯಕರ ಚರ್ಚೆ ನಡೆಯುತ್ತಿದ್ದದ್ದು ಕಂಡು ಬಂತು. ಎಲ್ಲಾ ಸಮುದಾಯದ ಮಂದಿ ತೀರ್ಪಿಗೆ ತೃಪ್ತಿ ವ್ಯಕ್ತಪಡಿಸುತ್ತಿದ್ದದ್ದು ವಿಶೇಷವಾಗಿತ್ತು.

ಸೋಮವಾರಪೇಟೆಯಲ್ಲಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖರಾದ ಬಿ.ಆರ್.ಮಹೇಶ್, ಸಿ.ಪಿ.ಗೋಪಾಲ್, ಸಿ.ಸಿ.ನಂದ, ಉಮೇಶ್, ಪಿ.ಕೆ.ಚಂದ್ರ, ಕೆ.ಎನ್.ದೀಪಕ್, ದರ್ಶನ್ ಜೋಯಪ್ಪ, ಸಂಪತ್, ರಮೇಶ್, ನಾಗರಾಜ್, ಮಧು, ಪ್ರಜು ಪೂಣಚ್ಚ ಮತ್ತಿತರರು ಹಾಜರಿದ್ದರು.

ಪಟ್ಟಣದ ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಿರಾಜಪೇಟೆ, ಗೋಣಿಕೊಪ್ಪ, ಕುಶಾಲನಗರದಲ್ಲಿ ಜನ ಜೀವನ ಎಂದಿನಂತೆ ಇತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News