ದೇಶದಲ್ಲಿ ಮತ್ತೊಂದು ಬಾಬರಿ ಮಸೀದಿ ನಿರ್ಮಾಣ ಸಾಧ್ಯವೇ ಇಲ್ಲ: ಪ್ರಮೋದ್ ಮುತಾಲಿಕ್

Update: 2019-11-10 12:18 GMT

ಚಿಕ್ಕಮಗಳೂರು, ನ.10: ರಾಮಜನ್ಮ ಭೂಮಿ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ಸ್ವಾಗತಾರ್ಹವಾಗಿದ್ದರೂ, ಸುನ್ನಿ ವಕ್ಫ್ ಬೋರ್ಡ್‍ಗೆ ನ್ಯಾಯಾಲಯ ಪರಿಹಾರದ ರೂಪವಾಗಿ ಭೂಮಿ ನೀಡಲು ಆದೇಶ ನೀಡಿರುವುದು ಸರಿಯಲ್ಲ ಎಂದು ಶ್ರೀ ರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದ ನಿಮಿತ್ತ ರವಿವಾರ ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ಮಸೀದಿ ನಿರ್ಮಾಣಕ್ಕೆಂದು ಅಯೋಧ್ಯೆಯಲ್ಲಿ 5 ಎಕರೆ ಜಮೀನು ನೀಡಲು ಆದೇಶ ನೀಡುವ ಮೂಲಕ ಬಾಬರಿ ಮಸೀದಿ ಅಲ್ಲಿತ್ತೆಂಬ ವಾದಕ್ಕೆ ಒಪ್ಪಿಗೆ ನೀಡಿದಂತಾಗಿದೆ. ಇದರಿಂದಾಗಿ ಸುನ್ನಿ ವಕ್ಫ್ ಬೋರ್ಡ್‍ನ ಹೋರಾಟಕ್ಕೆ ನ್ಯಾಯಾಲಯ ಮನ್ನಣೆ ನೀಡಿದಂತಾಗಿದ್ದು, ಮಸೀದಿ ನಿರ್ಮಾಣಕ್ಕೆ ಜಾಗ ನೀಡಬಾರದಿತ್ತೆಂದು ಅವರು ಹೇಳಿದ್ದಾರೆ.

ನ್ಯಾಯಾಲಯ ಸೌಹಾರ್ದ, ಶಾಂತಿಯ ಕಾರಣಕ್ಕೆ ಇಂತಹ ತೀರ್ಪು ನೀಡರಬಹುದು, ಆದರೆ ಇಂತಹ ತೀರ್ಪು ಆ ಜಾಗದಲ್ಲಿ ಬಾಬರಿ ಮಸೀದಿ ಇತ್ತೆಂಬ ಭಾವನೆ ಜನರಲ್ಲಿ ಮೂಡುವಂತಾಗುತ್ತದೆ. ಆದ್ದರಿಂದ ಇಂತಹ ತೀರ್ಪು ಸ್ವೀಕಾರಾರ್ಹವಲ್ಲ ಎಂದರು. 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನ್ಯಾಯಾಲಯ ಹಸಿರು ನಿಶಾನೆ ತೋರಿದೆ. ಇದು ರಾಮಮಂದಿರ ನಿರ್ಮಾಣದ ಪರವಾಗಿ ನಡೆದ ಹೋರಾಟ, ಬಲಿದಾನಕ್ಕೆ ಸಿಕ್ಕ ಜಯ ಎಂದ ಅವರು, ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಸರಕಾರ ಮೂರು ತಿಂಗಳೊಳಗೆ ಟ್ರಸ್ಟ್ ರಚನೆ ಮಾಡಿ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು. ಈ ಹೋರಾಟದಲ್ಲಿ ವಿಶ್ವ ಹಿಂದೂ ಪರಿಷದ್ ಸೇರಿದಂತೆ ಸಾಧು ಸಂತರ ಪಾತ್ರ ಪ್ರಮುಖವಾದ್ದು, ಅವರನ್ನು ಟ್ರಸ್ಟ್ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದರು.

ಅಯೋಧ್ಯೆ ವಿವಾದದಂತೆ ದತ್ತ ಪೀಠ ವಿವಾದಕ್ಕೂ ಶೀಘ್ರ ತೆರೆ ಎಳೆಯಲು ರಾಜ್ಯ ಸರಕಾರ ಮುಂದಾಗಬೇಕು. ಈ ಸಂಬಂಧ ಡಿ.12ರಂದು ನಡೆಯುವ ದತ್ತಜಯಂತಿ ಸಂದರ್ಭದಲ್ಲಿ ಎಲ್ಲ ಶಾಸಕರಿಗೂ ಮನವಿ ಮಾಡಿ, ವಿಧಾನಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತುವಂತೆ ಕೋರಲಾಗುವುದು. ರಾಜ್ಯ  ಸರಕಾರ ವಿಧಾನಸಭೆಯಲ್ಲೇ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದ ಅವರು, ಈ ಸಂಬಂಧದ ವಿವಾದವನ್ನು ನ್ಯಾಯಾಲಯದ ಹೊರಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ಸರಕಾರದ ಮುಂದಾದರೆ ಅದನ್ನು ಸ್ವಾಗತಿಸಲಾಗುವುದು ಎಂದ ಅವರು, ಇದು ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೇರಿದ್ದಾಗಲೇ ಆಗಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಶೀಘ್ರ ದತ್ತಪೀಠ ಹಿಂದೂಗಳದ್ದೆಂದು ರಾಜ್ಯ ಸರಕಾರ ಘೋಷಿಸುವಂತಾಗಬೇಕೆಂದರು.

ಅಯೋಧ್ಯೆ ಹೋರಾಟದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಪಾತ್ರ ಹೆಚ್ಚಿದ್ದರೂ ಅವರನ್ನು ಟ್ರಸ್ಟ್ ಗೆ ನೇಮಕ ಮಾಡಬಾರದು. ಅವರನ್ನು ಟ್ರಸ್ಟ್ ಗೆ ನೀಮಿಸಿಕೊಂಡಲ್ಲಿ ಅದು ರಾಜಕೀಯಕ್ಕೆ ಕಾರಣವಾಗುತ್ತದೆ, ಅಲ್ಲದೇ ಅವರಿಗೆ ವಯಸ್ಸಾಗಿರುವುದರಿಂದ ರಾಮ ಮಂದಿರ ನಿರ್ಮಾಣದಂತಹ ಮಹತ್ವದ ಜವಾಬ್ದಾರಿ ನಿರ್ವಹಿಸಲು ಅವರಿಗೆ ಸಾಧ್ಯವಾಗದು. ಆದ್ದರಿಂದ ಅಡ್ವಾಣಿ ಅವರನ್ನು ಟ್ರಸ್ಟ್ ಗೆ ನೇಮಿಸಿಕೊಳ್ಳದೇ ಕೇವಲ ಹಿರಿಯ ಮಾರ್ಗದರ್ಶಕರನ್ನಾಗಿರಿಸಿಕೊಳ್ಳುವುದು ಸೂಕ್ತ.

- ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ, ಶ್ರೀರಾಮಸೇನೆ

ಮತ್ತೊಂದು ಬಾಬರಿ ಮಸೀದಿ ನಿರ್ಮಾಣ ಸಾಧ್ಯವೇ ಇಲ್ಲ,
ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿಯ ಮೂಲಸ್ಥಾನದಲ್ಲಿ ಮಂದಿರ ನಿರ್ಮಾಣಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಬೇರೆಡೆ ಜಾಗ ನೀಡಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಸಂಸದ ಒವೈಸಿ, ಈ ಜಾಗವನ್ನು ತಿರಸ್ಕರಿಸಬೇಕು, ನ್ಯಾಯಾಲಯದ ಭಿಕ್ಷೆ ಮುಸ್ಲಿಮರಿಗೆ ಬೇಡ, ನೂರಾರು ಬಾಬರಿ ಮಸೀದಿಗಳ ನಿರ್ಮಾಣಕ್ಕೆ ಮುಸ್ಲಿಮರ ಬಳಿ ತಾಕತ್ತಿದೆ ಎಂದು ಮೂರ್ಖತನದ ಹೇಳಿಕೆ ನೀಡಿದ್ದಾರೆ. ಇದನ್ನು ಖಂಡಿಸುವುದಾಗಿ ಹೇಳಿದ ಪ್ರಮೋದ್ ಮುತಾಲಿಕ್, ದೇಶದಲ್ಲಿ ಮತ್ತೊಂದು ಬಾಬರಿ ಮಸೀದಿ ನಿರ್ಮಾಣ ಸಾಧ್ಯವೇ ಇಲ್ಲ, ಓವೈಸಿಗೆ ತಾಕತ್ತಿದ್ದರೇ ದೇಶಲ್ಲಿ ಒಂದೇ ಒಂದು ಬಾಬರಿ ಮಸೀದಿ ನಿರ್ಮಿಸಲಿ ನೋಡೋಣ ಎಂದು ಇದೇ ವೇಳೆ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News