ಚಿಕ್ಕಮಗಳೂರು: ಸಂಭ್ರಮ, ಸಡಗರದ ಮೀಲಾದುನ್ನಬಿ ಆಚರಣೆ

Update: 2019-11-10 18:11 GMT

ಚಿಕ್ಕಮಗಳೂರು, ನ.10: ಜಿಲ್ಲಾದ್ಯಂತ ಮೀಲಾದುನ್ನಬಿಯನ್ನು ಮುಸ್ಲಿಮರು ಸಂಭ್ರಮ ಸಡಗರದಿಂದ ಆಚರಿಸಿದ್ದು, ರವಿವಾರ ನಗರದಲ್ಲಿ ಸಾವಿರಾರು ಮಂದಿ ಅದ್ದೂರಿ ಮೆರವಣಿಗೆ ನಡೆಸುವ ಮೂಲಕ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಬೆಳಗ್ಗೆ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ವಯೋವೃದ್ಧರಾದಿಯಾಗಿ ಪುಟಾಣಿ ಮಕ್ಕಳು, ಯುವಕರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ಕೆಲವೆಡೆ ಹಿಂದು ಸಮುದಾಯದ ಜನರು ಶುಭಾಶಗಳನ್ನು ಕೋರುತ್ತಿದ್ದ ದೃಶ್ಯಗಳು ಕಂಡು ಬಂದವು.

ಹಬ್ಬದ ಅಂಗವಾಗಿ ನಗರದ ಎಂ.ಜಿ ರಸ್ತೆಯಲ್ಲಿ ಮೀಲಾದುನ್ನಬಿ ಮೆರವಣಿಗೆ ಹಿನ್ನೆಲೆಯಲ್ಲಿ ಎಂಜಿ, ರಸ್ತೆ ಹಾಗೂ ಅಂಡಛತ್ರದ ಬಡಾವಣೆಯ ಬೀದಿಗಳನ್ನು ಶನಿವಾರ ಸಂಜೆಯಿಂದಲೇ ಹಸಿರು ತೋರಣಗಳಿಂದ ಸಿಂಗರಿಸಿದ್ದು, ಸಾರ್ವಜನಿಕರ ಆಕರ್ಷಣೆಯಾಗಿತ್ತು. ರವಿವಾರ ಬೆಳಗ್ಗೆ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳು ನಗರದಲ್ಲಿ ಮುಚ್ಚಲ್ಪಟ್ಟು, ಎಲ್ಲರೂ ಹಬ್ಬದ ಸಡಗರದಲ್ಲಿ ಮುಳುಗಿದ್ದರು.

ಮಧ್ಯಾಹ್ನದ ನಂತರ ಅಂಡೆಛತ್ರದ ಮಸೀದಿಯಿಂದ ಮೀಲಾದುನ್ನಬಿ ಮೆರವಣಿಗೆ ಹೊರಡಲು ಸಿದ್ಧತೆ ಕೈಗೊಂಡಿದ್ದರಿಂದ ಜಿಲ್ಲಾಡಳಿತ ನಗರದ ಎಂ.ಜಿ ರಸ್ತೆ, ಐಜಿ ರಸ್ತೆ, ಹನುಮಂತಪ್ಪ ಸರ್ಕಲ್, ತೊಗರಿಹಂಕಲ್ ಸರ್ಕಲ್ ಮತ್ತಿತರ ರಸ್ತೆಗಳಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 7ರವರೆಗೆ ವಾಹನ ಸಂಚಾರ ಹಾಗೂ ವಾಹನಗಳ ಪಾರ್ಕಿಂಗ್ ನಿಷೇಧಿಸಿತ್ತು. ಮಧ್ಯಾಹ್ನದ ನಗರದ ಅಂಡೆಛತ್ರದಿಂದ ಹೊರಟ ಮೀಲಾದುನ್ನಬಿ ಮೆರವಣಿಗೆ ಐಜಿ ರಸ್ತೆ, ಎಂಜಿ ರಸ್ತೆ ಮಾರ್ಗವಾಗಿ, ಬಸವನಹಳ್ಳಿ ರಸ್ತೆ, ಹನುಮಂತಪ್ಪ ಸರ್ಕಲ್‍ನಲ್ಲಿ ಅದ್ದೂರಿಯಾಗಿ ಸಾಗಿತು. ಮೆರವಣಿಗೆಯಲ್ಲಿ ನಗರದ ಸಾವಿರಾರು ಮುಸ್ಲಿಮರು ಭಾಗವಹಿಸುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು. 

ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರವಿದ್ದ ಬಾವುಟಗಳು ರಾರಾಜಿಸಿದ್ದವು. ಅಲ್ಲದೇ ಟಿಪ್ಪು ಸುಲ್ತಾನ್ ಪರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಬಿಳಿ ಬಟ್ಟೆಯಲ್ಲಿ ರಚಿಸಲಾಗಿದ್ದ ಟಿಪ್ಪು ಸುಲ್ತಾನನ ಭಾವಚಿತ್ರ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಕೇಸರಿ, ಹಸಿರು, ಬಿಳಿ ಬಣ್ಣದ ತ್ರಿವರ್ಣ ಧ್ವಜಗಳು ಮೆರವಣಿಯಲ್ಲಿ ರಾರಾಜಿಸಿದವು. ಮೆರವಣಿಗೆ ಸಾಗಿದ ರಸ್ತೆಗಳ ಅಲ್ಲಲ್ಲಿ ಕೆಲವರು ಮೆರವಣಿಯಲ್ಲಿ ಭಾಗವಹಿಸಿದ್ದವರಿಗೆ ಹಾಗೂ ಸಾರ್ವಜನಿಕರಿಗೆ ತಂಪು ಪಾನೀಯ, ಹಣ್ಣು ಹಂಪಲನ್ನು ವಿತರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಶ್ವೇತ ವಸ್ತ್ರಧಾರಿಗಳು, ಯುವಕರ ನೃತ್ಯ, ಟಿಪ್ಪು ಭಾವಚಿತ್ರ ಮೆರವಣಿಯ ಮೆರುಗನ್ನು ಹೆಚ್ಚಿಸಿದ್ದವು. ಸಂಘಟಕರು ಮೆರವಣಿಯನ್ನು ನಿಯಂತ್ರಿಸುತ್ತಿದ್ದರೆ, ನಗರದ ಸಾರ್ವಜನಿಕರು ಹಾಗೂ ಮುಸ್ಲಿಂ ಸಮುದಾಯದ ಮಹಿಳೆಯರು ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಮೆರವಣಿಗೆಯ ನೋಟವನ್ನು ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯಗಳೂ ಸಾಮಾನ್ಯವಾಗಿದ್ದವು.

ಮೀಲಾದುನ್ನಬಿ ಮೆರವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಾವಿರಾರು ಪೊಲೀಸರನ್ನು ಸೂಕ್ಷ್ಮ ಪ್ರದೇಶಗಳು ಹಾಗೂ ರಸ್ತೆಯುದ್ದಕ್ಕೂ ಭದ್ರತೆಗೆ ನಿಯೋಜಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News