ಶಿವಮೊಗ್ಗ: ತಿರುಪತಿ, ಚೆನ್ನೈ, ಮೈಸೂರು ರೈಲುಗಳ ಸಂಚಾರಕ್ಕೆ ಸಂಸದರಿಂದ ಹಸಿರು ನಿಶಾನೆ

Update: 2019-11-10 18:21 GMT

ಶಿವಮೊಗ್ಗ, ನ. 10: ತಿರುಪತಿ, ಚೆನ್ನೈ ಹಾಗೂ ಮೈಸೂರು ನಗರಕ್ಕೆ ಮಂಜೂರಾಗಿದ್ದ ಮೂರು ಪ್ರತ್ಯೇಕ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳ ಸಂಚಾರಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು ಭಾನುವಾರ ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಸಂಚಾರಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. 

ನಿಲ್ದಾಣ ಮುಂಭಾಗದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ನಂತರ ಸುದ್ದಿಗಾರರೊಂದಿಗೆ ಸಂಸದರು ಮಾತನಾಡಿದರು. 'ರೈಲ್ವೆ ಸಂಪರ್ಕದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಕ್ರಾಂತಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಹಲವೆಡೆ, ಹೊರ ರಾಜ್ಯಗಳಿಗೆ ರೈಲು ಓಡಿಸಲು ಕ್ರಮಕೈಗೊಳ್ಳಲಾಗುವುದು' ಎಂದರು. 

ಶಿವಮೊಗ್ಗದಲ್ಲಿ ಸರ್ವಿಸ್ ಕೇಂದ್ರ ಆರಂಭವಾಗಲಿದೆ. 3500 ಕಿ.ಮೀ. ದೂರ ಸಾಗಿದರೆ ರೈಲು ಇಂಜಿನ್‍ಗಳಿಗೆ ಸರ್ವಿಸ್ ಅವಶ್ಯಕತೆಯಿರಲಿದೆ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಸರ್ವಿಸ್ ಕೇಂದ್ರ ಎಲ್ಲೂ ಇಲ್ಲ. ಶಿವಮೊಗ್ಗದಲ್ಲಿ ಕೇಂದ್ರ ಆರಂಭವಾಗುವುದರಿಂದ, ಎಲ್ಲ ರೈಲುಗಳು ಇಲ್ಲಿಗೆ ಬರಲಿವೆ ಎಂದರು. 

ಕ್ರಮ: ಪ್ರಸ್ತುತ ತಿರುಪತಿ, ಚೆನ್ನೈ ನಡುವೆ ಆರಂಭವಾಗಿರುವ ರೈಲುಗಳನ್ನು ಮುಂದಿನ ದಿನಗಳಂದು ವಾರಕ್ಕೆರೆಡು ಬಾರಿ ಓಡಿಸುವ ಚಿಂತನೆಯಿದೆ. ತಿರುಪತಿಯಲ್ಲಿ ದೇವರ ದರ್ಶನ ಮಾಡಿಕೊಂಡು ಬರುವವರಿಗೆ ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲಿನಿಂದ ಅನುಕೂಲವಾಗಲಿದೆ ಎಂದರು. 

ಶಿವಮೊಗ್ಗದಿಂದ ಶಿಕಾರಿಪುರದ ಮೂಲಕ ರಾಣೆಬೆನ್ನೂರಿಗೆ ತಲುಪುವ ರೈಲ್ವೆ ಸಂಪರ್ಕಕ್ಕೆ ಸರ್ವೆ ಪ್ರಗತಿಯಲ್ಲಿದೆ. ಭೂ ಸ್ವಾದೀನಕ್ಕೆ ಸಂಬಂಧಿಸಿದಂತೆ ಮೂರು ಉಪ ವಿಭಾಗಗಳ ಸಮಸ್ಯೆಯಿತ್ತು. ಇದಕ್ಕೆ ಪರಿಹಾರ ಕಲ್ಪಿಸಿ, ಮೂರು ಉಪ ವಿಭಾಗಗಳಿಗೂ ಓರ್ವರೇ ಎಸ್‍ಎಲ್‍ಓ ನೇಮಿಸಲಾಗುತ್ತಿದೆ. ಕಾಲಮಿತಿಯಲ್ಲಿ ಭೂ ಸ್ವಾದೀನ ಪ್ರಕ್ರಿಯೆ ನಡೆಸಿ, ಮಾರ್ಗ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. 

ಬೀರೂರು-ಶಿವಮೊಗ್ಗ ನಡುವೆ ದ್ವಿ ಪಥ ಮಾರ್ಗ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವುದರತ್ತ ಗಮನಹರಿಸಲಾಗುವುದ. ರೋಟರಿ ರಕ್ತನಿಧಿಯಿಂದ ಕೆಇಬಿ ವೃತ್ತದ ಮೂಲಕ ಸಾಗುವ ರಿಂಗ್ ರಸ್ತೆಗೆ, ರೈಲ್ವೆ ಕ್ವಾಟ್ರಸ್ ಬಳಿ ತಕರಾರು ಇತ್ತು. ಅದನ್ನ ಸರಿಪಡಿಸಿ ರಿಂಗ್ ರಸ್ತೆಗೆ ರೈಲ್ವೆ ಕ್ವಾಟ್ರರ್ಸ್ ಗಳನ್ನ ಬೇರೆಡೆ ಸ್ಥಳಾಂತರಿಸಿ ಸದ್ಯದಲ್ಲಿಯೇ 12 ಕೋಟಿ ರೂ. ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣವಾಗಲಿದೆ. 

ಶಿವಮೊಗ್ಗದ ಎಲ್ಲ ರಸ್ತೆಗಳು ಮಳೆಯಿಂದ ಗುಂಡಿ ಬಿದ್ದಿವೆ. ಇವುಗಳನ್ನ ಸರಿಪಡಿಸಲು ಮಹಾನಗರ ಪಾಲಿಕೆ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲು ಸೂಕ್ತ ಕ್ರಮ ಜರುಗಿಸಲಿದೆ ಎಂದು ಇದೇ ವೇಳೆ ಸಂಸದರು ತಿಳಿಸಿದರು. 

ಹೊಸ ರೈಲುಗಳ ವೇಳಾಪಟ್ಟಿ ವಿವರ
ಶಿವಮೊಗ್ಗ-ಚೆನ್ನೈ ವೀಕ್ಲಿ ಸ್ಪೆಷಲ್ ಎಕ್ಸ್‍ಪ್ರೆಸ್ ರೈಲು ಶಿವಮೊಗ್ಗದಿಂದ ಪ್ರತಿ ಸೋಮವಾರ ರಾತ್ರಿ 11.55 ಗಂಟೆ ಸಂಚಾರ ಆರಂಭಿಸಲಿದ್ದು, ಮಂಗಳವಾರ ಬೆಳಿಗ್ಗೆ 11.15 ಕ್ಕೆ ಚೆನ್ನೈ ತಲುಪಲಿದೆ. ಚೆನ್ನೈನಿಂದ ಪ್ರತಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹೊರಡಲಿದ್ದು, ಬುಧವಾರ ಬೆಳಗಿನ ಜಾವ 3.55 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದೆ. 

ಶಿವಮೊಗ್ಗ-ತಿರುಪತಿ (ರೇಣಿಗುಂಟ) ವೀಕ್ಲಿ ಸ್ಪೆಷಲ್ ಎಕ್ಸ್‍ಪ್ರೆಸ್ ರೈಲು ಶಿವಮೊಗ್ಗದಿಂದ ಪ್ರತಿ ಬುಧವಾರ ಬೆಳಗ್ಗೆ 6.15 ಗಂಟೆಗೆ ಹೊರಡಲಿದೆ. ತಿರುಪತಿ ಸಮೀಪದ ರೇಣಿಗುಂಟ ರೈಲು ನಿಲ್ದಾಣಕ್ಕೆ ಬುಧವಾರ ರಾತ್ರಿ 8.05 ಗಂಟೆಗೆ ತಲುಪಲಿದೆ.  ತಿರುಪತಿ ರೇಣಿಗುಂಟದಿಂದ ಪ್ರತಿ ಬುಧವಾರ ರಾತ್ರಿ 9.45 ಗಂಟೆಗೆ ರೈಲು ಹೊರಡಲಿದ್ದು, ಗುರುವಾರ ಬೆಳಗ್ಗೆ 11.45 ಗಂಟೆಗೆ ಶಿವಮೊಗ್ಗ ತಲುಪಲಿದೆ. 

ಮೈಸೂರು-ಶಿವಮೊಗ್ಗ ಜನಸಾಧಾರಣ್ ವೀಕ್ಲಿ ಎಕ್ಸ್‍ಪ್ರೆಸ್ ರೈಲು ಪ್ರತಿ ಸೋಮವಾರ ಸಂಜೆ 4.40 ಗಂಟೆಗೆ ಮೈಸೂರಿನಿಂದ ಸಂಚಾರ ಆರಂಭಿಸಲಿದ್ದು, ರಾತ್ರಿ 10.30 ಕ್ಕೆ ಶಿವಮೊಗ್ಗ ತಲುಪಲಿದೆ. ಪ್ರತಿ ಗುರುವಾರ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಿಂದ ಸಂಚಾರ ಆರಂಭಿಸಲಿದ್ದು, ಸಂಜೆ 7.05 ಕ್ಕೆ ಮೈಸೂರು ತಲುಪಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News