ರೈಲುಗಳ ಮುಖಾಮುಖಿ ಢಿಕ್ಕಿ..!

Update: 2019-11-11 18:04 GMT

ತೆಲಂಗಾಣದ ಹೈದರಾಬಾದ್‌ನಲ್ಲಿರುವ ಕಾಚಿಗುಡ ರೈಲು ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್ ಪ್ರೆಸ್ ರೈಲಿಗೆ ಲೋಕಲ್ ರೈಲೊಂದು ಢಿಕ್ಕಿಯಾಗಿದ್ದು ಘಟನೆಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ನಂ.2ರಲ್ಲಿ ಆಗಮಿಸಲು ಲೋಕಲ್ ಟ್ರೈನ್‌ಗೆ ಹಸಿರು ನಿಶಾನೆ ತೋರಲಾಗಿದೆ. ಆದರೆ ಅದೇ ಫ್ಲಾಟ್‌ಫಾರಂನಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ನಿಂತಿತ್ತು. ನಿಲ್ದಾಣ ಸಮೀಪಿಸುತ್ತಿರುವಂತೆಯೇ ಲೋಕಲ್ ಟ್ರೈನ್‌ನ ವೇಗ ಕಡಿಮೆಯಾದ ಕಾರಣ ಅಪಘಾತದ ತೀವ್ರತೆಯೂ ಕಡಿಮೆಯಾ ಗಿದೆ. ಪ್ಲಾಟ್‌ಫಾರಂನಿಂದ ಕೆಲವು ಮೀಟರ್‌ಗಳ ದೂರದಲ್ಲಿ ರೈಲು ಢಿಕ್ಕಿಯಾಗಿದೆ. ಅಪಘಾತದಲ್ಲಿ ಲೋಕಲ್ ಟೈನ್‌ನ ಇಂಜಿನ್‌ಗೆ ಹಾನಿಯಾಗಿದ್ದು ಆರು ಬೋಗಿಗಳು ಹಳಿತಪ್ಪಿವೆ. ಲೋಕಲ್ ಟ್ರೈನ್‌ನ ಡ್ರೈವರ್ ಶೇಖರ್ ಗಂಭೀರ ಗಾಯಗೊಂಡಿದ್ದು ಇಂಜಿನ್‌ನ ಮಧ್ಯೆ ಸಿಲುಕಿಕೊಂಡಿದ್ದ ಅವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಎಕ್ಸ್‌ಪ್ರೆಸ್ ರೈಲಿನ 3 ಬೋಗಿಗಳೂ ಹಳಿತಪ್ಪಿವೆ. 12 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಇವರಲ್ಲಿ ಇಬ್ಬರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor