ವಿದೇಶಿ ಸಂಸ್ಥೆಗಳ ಜೊತೆ ಕೈಜೋಡಿಸಲು ಮುಂದಾದ 'ಅಪ್ಪಟ ಸ್ವದೇಶಿ' ಬ್ರ್ಯಾಂಡ್ ಪತಂಜಲಿ

Update: 2019-11-12 06:15 GMT
File Photo: BCCL

ಹೊಸದಿಲ್ಲಿ : ತನ್ನದು ಅಪ್ಪಟ ಸ್ವದೇಶಿ ಉತ್ಪನ್ನ ಎಂದು ಹೇಳಿಕೊಂಡು ಮಾರುಕಟ್ಟೆಗೆಗೆ ಕೆಲ ವರ್ಷಗಳ ಹಿಂದೆ ಲಗ್ಗೆಯಿಟ್ಟಿದ್ದ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಎಫ್‍ಎಂಸಿಜಿ ಕ್ಷೇತ್ರದಲ್ಲಿ ಬಹಳ ಬೇಗನೇ ಹಲವು ಪ್ರಮುಖ ಹೆಸರುಗಳಾದ ಹಿಂದುಸ್ತಾನ್ ಯುನಿಲಿವರ್ ಹಾಗೂ ಪಿ&ಜಿ ಕಂಪೆನಿಯನ್ನು ಹಿಂದಿಕ್ಕಿತ್ತು. ಒಂದು ಕಾಲದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೂ ಬಹಿರಂಗವಾಗಿ ಸವಾಲೆಸೆದಿದ್ದ  ರಾಮದೇವ್ ತಮ್ಮ ಬ್ರ್ಯಾಂಡ್ 2025ರ ಹೊತ್ತಿಗೆ ಜಗತ್ತಿನ ಅತ್ಯಂತ ದೊಡ್ಡ ಎಫ್‍ಎಂಜಿಜಿ ಬ್ರ್ಯಾಂಡ್ ಆಗಲಿದೆ ಎಂದೂ ಹೇಳಿಕೊಂಡಿದ್ದರು.

ಆದರೆ ಗುಣಮಟ್ಟದ ಕೊರತೆಯ ಆರೋಪ ಸಹಿತ ಹಲವು ಕಾರಣದಿಂದ ಬಹಳ ಬೇಗನೇ ತನ್ನ ಗ್ರಾಹಕರನ್ನು ಕಳೆದುಕೊಳ್ಳಲು ಆರಂಭಿಸಿದ್ದ ಪತಂಜಲಿ ಇದೀಗ ತಾನು ಜಾಗತಿಕ ಕಂಪೆನಿಗಳೊಂದಿಗೆ ಒಪ್ಪಂದಕ್ಕೆ ಸಿದ್ಧವಿದೆ ಎಂದು ಹೇಳಿಕೊಂಡಿದೆ.

"ನಮ್ಮ ಮುಂದೆ ಜಾಗತಿಕ ಕಂಪೆನಿಗಳಿಂದ ಮೂರ್ನಾಲ್ಕು ಆಫರ್ ಗಳಿವೆ ಹಾಗೂ ಈ ಕಂಪೆನಿಗಳು ಪತಂಜಲಿ ಜತೆ ಒಪ್ಪಂದಕ್ಕೆ ಆಸಕ್ತಿ ಹೊಂದಿವೆ,'' ಎದು ಕಂಪೆನಿಯ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

"ನಾವು ಪ್ರತಿಪಾದಿಸುವ ಮೌಲ್ಯಗಳಿಗೆ ಯಾವುದೇ ಧಕ್ಕೆಯುಂಟಾಗದೇ ಇರದ ರೀತಿಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಜತೆ ಕೆಲಸ ಮಾಡಲು ನಮ್ಮ ಅಭ್ಯಂತರವೇನಿಲ್ಲ. ನಮ್ಮ ಮುಂದಿರುವ ಆಫರ್‍ಗಳನ್ನು ಪರಿಗಣಿಸುತ್ತಿದ್ದೇವೆ,'' ಎಂದು ಅವರು ತಿಳಿಸಿದ್ದಾರೆ. ಆದರೆ ಯಾವ ಕಂಪೆನಿಗಳ ಆಫರ್ ಇದೆ ಎಂದು ಅವರು ಬಹಿರಂಗ ಪಡಿಸಿಲ್ಲ. ಜಿಎಸ್‍ಟಿ ಜಾರಿಯಿಂದ ತಮ್ಮ ಸಂಸ್ಥೆಗೆ ತೀವ್ರ ಹೊಡೆತ ಬಿದ್ದಿದೆ ಎಂದು ಅವರು ಈ ಹಿಂದೆ ಹೇಳಿದ್ದರು.

ಕಳೆದ ವರ್ಷ ಫ್ರೆಂಚ್ ಲಕ್ಸುರಿ ಗ್ರೂಪ್ ಎಲ್‍ವಿಎಂಎಚ್ ಮೋಟ್ ಹೆನ್ನೆಸ್ಸಿ ಲೂಯಿಸ್ ವಿಯುಟ್ಟನ್ ಎಸ್‍ಇ ಪತಂಜಲಿಯಲ್ಲಿ ಪಾಲು ಬಂಡವಾಳ ಹೊಂದಲು ಬಯಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News