ಫೆಬ್ರವರಿ 5ರಿಂದ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Update: 2019-11-12 16:25 GMT

ಕಲಬುರಗಿ, ನ.12: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ 2020 ರ ಫೆಬ್ರವರಿ 5 ರಿಂದ 7 ರವರೆಗೆ ಕಲಬುರಗಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್ ಹೇಳಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಾಹಿತಿಗಳ, ಸಂಘಟಕರ ಸಭೆ ನಂತರ ಕಸಾಪ ಅಧ್ಯಕ್ಷ ಬಳಿಗಾರ್ ದಿನಾಂಕವನ್ನು ಪ್ರಕಟಿಸಿದರು. ಸಮ್ಮೇಳನಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣ ಅಂತಿಮಗೊಳಿಸಲಾಗಿದ್ದು, ತಿಂಗಳೊಳಗೆ ಸಮ್ಮೇಳನಾಧ್ಯಕ್ಷರನ್ನು ಕಾರ್ಯಕಾರಿಣಿ ಸಭೆ ಕರೆದು ಆಯ್ಕೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಮ್ಮೇಳನವು ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯ ಸ್ವಾಗತ ಸಮಿತಿಯಡಿ ನಡೆಯಲಿದ್ದು, ಕಾರಜೋಳಗೆ ಮುಧೋಳದಲ್ಲಿ ಸಮ್ಮೇಳನ ಉಸ್ತುವಾರಿ ವಹಿಸಿರುವ ಹಾಗೂ ಹಿರಿತನದ ಅನುಭವ ಹೊಂದಿರುವುದರಿಂದ ಎರಡು ತಿಂಗಳೊಳಗೆ ಎಲ್ಲ ಸಿದ್ದತೆಗಳು ಪೂರ್ಣಗೊಳ್ಳಲಿವೆ. ಈ ಬಾರಿ ಸಮ್ಮೇಳನಕ್ಕೆ ಅಂದಾಜು 12 ಕೋಟಿ ಖರ್ಚಾಗಬಹುದು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಸಮಸ್ಯೆಗಳು ಮತ್ತು ಪರಿಹಾರಗಳು, ದಲಿತ ಬಂಡಾಯ ಸಾಹಿತ್ಯ, ನೈಸರ್ಗಿಕ ವಿಕೋಪ ತಡೆಯುವಿಕೆ ಸೇರಿದಂತೆ ಇತರ ವಿಷಯಗಳ ಗೋಷ್ಠಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ವಿ.ವಿ. ಮುಖ್ಯ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ ನಿರ್ಮಾಣ ಮಾಡಲಾಗುವುದು. ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣ ಹಾಗೂ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸಮಾನಾಂತರ ಗೋಷ್ಠಿಗಳು ನಡೆಯಲಿವೆ. ನಗರದಿಂದ ವಿ.ವಿ. ಆವರಣಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಸಂಸ್ಥೆಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕ್ರಣ್ಣ ವಣಿಕ್ಯಾಳ, ಜಿಲ್ಲಾ ಪಂಚಾಯತ ಸಿಇಓ ಡಾ.ಪಿ.ರಾಜಾ ಸೇರಿದಂತೆ ಅನೇಕರಿದ್ದರು.

ಸಾಹಿತಿ, ಅಧಿಕಾರಿಗಳೊಂದಿಗೆ ಸಭೆ: ಮೂರು ವರ್ಷಗಳ ನಂತರ ಕಲ್ಯಾಣ ಕರ್ನಾಟಕ ಕಲಬುರಗಿಯಲ್ಲಿ ಕನ್ನಡದ ತೇರು ಎಳೆಯಲು ಉತ್ಸುಕತೆ ಹೊಂದಿರುವುದಾಗಿ ಹಿರಿಯ ಸಾಹಿತಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಸಲಹೆ ನೀಡಿದರು.

ಸಭೆಯಲ್ಲಿ ಕರ್ನಾಟಕ ಕೇಂದ್ರೀಯ ವಿವಿಯ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ, ಜಿಲ್ಲಾ ಪಂಚಾಯತ್ ಸಿಇಓ ಡಾ. ಪಿ.ರಾಜಾ, ಕೇಂದ್ರ ಕಸಾಪ ಸಮಿತಿಯ ನಾರಾಯಣ, ಕಲಬುರಗಿ ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಹಿರಿಯ ಸಾಹಿತಿಗಳಾದ ಪ್ರೊ.ವಸಂತ ಕುಷ್ಟಗಿ, ಡಾ.ಪಿ.ಎಸ್. ಶಂಕರ, ಸ್ವಾಮಿರಾವ ಕುಲಕರ್ಣಿ, ಲಿಂಗರಾಜ ಶಾಸ್ತ್ರಿ, ವೀರಣ್ಣ ದಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News