ನಾಳೆ ಅನರ್ಹ ಶಾಸಕರ ಭವಿಷ್ಯ ನಿರ್ಧಾರ: ಸುಪ್ರೀಂ ತೀರ್ಪಿನತ್ತ ಎಲ್ಲರ ಚಿತ್ತ

Update: 2019-11-12 13:44 GMT

ಬೆಂಗಳೂರು, ನ. 12: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅನರ್ಹಗೊಂಡ ಕಾಂಗ್ರೆಸ್-ಜೆಡಿಎಸ್‌ನ ಹದಿನೇಳು ಮಂದಿ ಶಾಸಕರ ಭವಿಷ್ಯವನ್ನು ಸುಪ್ರೀಂ ಕೋರ್ಟ್ ನಾಳೆ(ನ.13) ನಿರ್ಧರಿಸಲಿದೆ.

ಅಂದಿನ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರ ಆದೇಶವನ್ನು ಪ್ರಶ್ನಿಸಿ ಅನರ್ಹರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ನಾಳೆ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಮಧ್ಯೆಯೇ ಅನರ್ಹರು ಪ್ರತಿನಿಧಿಸುತ್ತಿದ್ದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ತೀರ್ಪು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಈ ಬೆಳವಣಿಗೆಗಳ ನಡುವೆಯೇ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅನರ್ಹರ ಕುರಿತು ಮಾತನಾಡಿದ್ದ ಆಡಿಯೋ ಬಹಿರಂಗವಾಗಿತ್ತು. ಈ ಆಡಿಯೋವನ್ನು ಆಪರೇಷನ್ ಕಮಲಕ್ಕೆ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಕಾಂಗ್ರೆಸ್ ಕೋರ್ಟ್‌ಗೆ ಮನವಿ ಮಾಡಿದ್ದು, ಬಿಎಸ್‌ವೈಗೆ ಸಂಕಷ್ಟ ಸೃಷ್ಟಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶರಾದ ಎನ್.ವಿ.ರಮಣ, ಸಂಜೀವ್ ಖನ್ನಾ, ಕೃಷ್ಣ ಮುರಾರಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ತೀರ್ಪು ಪ್ರಕಟಿಸಲಿದೆ. ಆ ಹಿನ್ನೆಲೆಯಲ್ಲಿ ಅನರ್ಹ ಶಾಸಕರಾದ ಎಚ್.ವಿಶ್ವನಾಥ್, ಬಿ.ಸಿ. ಪಾಟೀಲ್ ಸೇರಿದಂತೆ ಇನ್ನಿತರರು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಕೋರ್ಟ್ ಎತ್ತಿಹಿಡಿಯಲಿದೆಯೋ ಅಥವಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ಕಲ್ಪಿಸಲಿದೆಯೋ ಎಂಬ ಕುತೂಹಲ ಸೃಷ್ಟಿಸಿದ್ದು, ಎಲ್ಲರ ಚಿತ್ತ ನಾಳೆ ಪ್ರಕಟಗೊಳ್ಳಲಿರುವ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ.

‘ಸೋ ಕಾಲ್ಡ್ ಬುದ್ಧಿಜೀವಿ ರಮೇಶ್‌ ಕುಮಾರ್ ನಮ್ಮನ್ನು ಅನರ್ಹಗೊಳಿಸುವ ತೀರ್ಮಾನ ಮಾಡಿ ಶಾಸಕರ ವೇದಿಕೆಯನ್ನೇ ಬೆತ್ತಲಾಗುವಂತೆ ಮಾಡಿದರು. ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದ್ದು, ಕೋರ್ಟ್ ಕಾನೂನು ಎತ್ತಿ ಹಿಡಿಯುವ ನಿರೀಕ್ಷೆ ಇದೆ’
-ಎಚ್.ವಿಶ್ವನಾಥ್, ಅನರ್ಹ ಶಾಸಕ, ಹುಣಸೂರು ಕ್ಷೇತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News