ಶಿವಮೊಗ್ಗ: ಇಸ್ತ್ರಿ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಎಂಬಿಬಿಎಸ್ ವಿದ್ಯಾರ್ಥಿ ಮೃತ್ಯು

Update: 2019-11-12 13:54 GMT

ಶಿವಮೊಗ್ಗ, ನ.12: ನಗರದ ಹೊರವಲಯ ಪುರಲೆಯ ಸುಬ್ಬಯ್ಯ ಮೆಡಿಕಲ್ ಕಾಲೇಜ್‍ನ ವಿದ್ಯಾರ್ಥಿಯೋರ್ವ, ತಾನು ತಂಗಿದ್ದ ಕೊಠಡಿಯಲ್ಲಿ ಬಟ್ಟೆಗಳಿಗೆ ಇಸ್ತ್ರಿ ಮಾಡುವ ವೇಳೆ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಮೃತಪಟ್ಟ ಘಟನೆ ನಡೆದಿದೆ. ಆದರೆ ವಿದ್ಯಾರ್ಥಿಯ ಸಾವಿನ ಸುತ್ತ ಅನುಮಾನಗಳು ಸೃಷ್ಟಿಯಾಗಿವೆ.

ಮೂಲತಃ ದಾವಣಗೆರೆಯ ನಿವಾಸಿ, ಅಂತಿಮ ವರ್ಷದ ಎಂಬಿಬಿಎಸ್ ಅಭ್ಯಾಸ ಮಾಡುತ್ತಿದ್ದ ನಿತಿನ್ (23) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಪುರಲೆ ಗ್ರಾಮದಲ್ಲಿಯೇ ಬಾಡಿಗೆ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ: ಸೋಮವಾರ ಮಧ್ಯಾಹ್ನ ಈತ ಕಾಲೇಜ್‍ನಿಂದ ಕೊಠಡಿಗೆ ಆಗಮಿಸಿದ್ದಾನೆ. ಸಂಜೆ 5.30 ರ ಸುಮಾರಿಗೆ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಪರಿಶೀಲಿಸಿದಾಗ ನಿತಿನ್ ಸುಟ್ಟ ಗಾಯಕ್ಕೆ ತುತ್ತಾಗಿ ಪ್ರಜ್ಞೆ ಕಳೆದುಕೊಂಡು ಬಿದ್ದಿರುವುದು ಕಂಡುಬಂದಿದೆ. 
ತಕ್ಷಣವೇ ಆತ ಅಭ್ಯಾಸ ಮಾಡುತ್ತಿದ್ದ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪರಿಶೀಲಿಸಿದ ವೈದ್ಯರು ವಿದ್ಯಾರ್ಥಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಅನುಮಾನ: ಕೊಠಡಿಯಲ್ಲಿ ಹಾಸಿಗೆಯೂ ಸುಟ್ಟು ಹೋಗಿದೆ. ಇಸ್ತ್ರಿ ಪೆಟ್ಟಿಗೆಯ ಬಾಕ್ಸ್ ನ ವೈರ್ ಕೂಡ ಕಿತ್ತು ಹೋಗಿದ್ದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಬಟ್ಟೆಗೆ ಇಸ್ತ್ರಿ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಬೆಂಕಿ ಹೊತ್ತಿಕೊಂಡು ನಿತಿನ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದ್ದರೂ, ಈ ಸಾಧ್ಯತೆ ಅತ್ಯಂತ ವಿರಳ ಎಂದು ಹೇಳಲಾಗುತ್ತಿದೆ. 

ವಿದ್ಯಾರ್ಥಿ ಸಾವಿನ ಬಗ್ಗೆ ಹಲವು ಶಂಕೆಗಳು ಮೂಡುತ್ತಿದ್ದು, ವಿದ್ಯಾರ್ಥಿಯ ಪೋಷಕರು ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News