ನಮ್ಮ ಸರಕಾರಕ್ಕೆ ಯಾವ ಬೆದರಿಕೆಯೂ ಇಲ್ಲ: ಅಶ್ವಥ್ ನಾರಾಯಣ

Update: 2019-11-12 14:06 GMT

ಬೆಂಗಳೂರು, ನ. 12: ‘ನಮ್ಮ ಸರಕಾರ ಸುಭದ್ರವಾಗಿದೆ. ಯಾವ ಬೆದರಿಕೆಯೂ ಇಲ್ಲ, ಪೂರ್ಣಾವಧಿ ಆಡಳಿತ ನಡೆಸುತ್ತೇವೆ. ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ. 

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಪಕ್ಷಗಳ ಆರೋಪದಲ್ಲಿ ಯಾವುದೆ ಹುರುಳಿಲ್ಲ. ನಮ್ಮ ಸರಕಾರಕ್ಕೆ ಯಾವ ಬೆದರಿಕೆಯೂ ಇಲ್ಲ. ಪೂರ್ಣಾವಧಿಯ ಆಡಳಿತ ನಡೆಸುತ್ತೇವೆ ಎಂದು ತಿರುಗೇಟು ನೀಡಿದರು. ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರು ಅಂತಿಮ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ, ಪಕ್ಷ ಮತ್ತು ಸರಕಾರದ ನಿಲುವು ಸ್ಪಷ್ಟವಾಗಲಿದೆ. ತೀರ್ಪಿನ ನಂತರ ನಮ್ಮ ಮುಂದಿನ ನಡೆ ತೀರ್ಮಾನವಾಗಲಿದೆ ಎಂದರು.

ಬೇರೆ ದೇಶಗಳ ಜತೆ ಸ್ಪರ್ಧೆ: ಅಮೆಜಾನ್ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದು, ಬೆಂಗಳೂರು ಮತ್ತು ಅಮರಾವತಿ ನಡುವೆ ಸ್ಪರ್ಧೆ ಏರ್ಪಟ್ಟಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೆರೆಯ ರಾಜ್ಯದ ನಡುವೆ ಸ್ಪರ್ಧೆಯ ಪ್ರಶ್ನೆಯೇ ಇಲ್ಲ. ನಮ್ಮದು ಬೇರೆ ದೇಶಗಳ ಜತೆ ಸ್ಪರ್ಧೆ ಎಂದರು.

ನೀತಿ ನಿಯಮಾವಳಿಯ ಆಧಾರದಲ್ಲಿ ಕೆಲ ಸಂಸ್ಥೆಗಳ ಸ್ಥಳಾಂತರ ಆಗಿರಬಹುದು. ಇನ್ನು ಮುಂದೆ ಇಂಥದಕ್ಕೆ ಅವಕಾಶ ಕೊಡಲ್ಲ. ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ತರುತ್ತೇವೆ. ಬೆಳವಣಿಗೆ ಎಂಬುದು ನಿರಂತರ ಪ್ರಕ್ರಿಯೆ. ವಿಷನ್ ಗ್ರೂಪ್ ಜತೆ ಸಂಪರ್ಕದಲ್ಲಿದ್ದು, ಅವರ ಸಲಹೆ, ಮಾಹಿತಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಅನ್ವೇಷಣಾ ಕೇಂದ್ರ, ಇನ್‌ಕ್ಯೂಬೇಟರ್ ಸ್ಥಾಪನೆಗೆ ಅಗತ್ಯ ನೆರವು ಒದಗಿಸಲಾಗುವುದು. ಮೂಲಸೌಕರ್ಯ ಕಲ್ಪಿಸುವ ಜತೆಗೆ ಎಲ್ಲ ಅಡೆತಡೆ ನಿವಾರಿಸಿ ಪೂರಕ ವಾತವಾರಣ ನಿರ್ಮಿಸಲಾಗುವುದು. ಈ ಸಂಬಂಧ ಉನ್ನತಾಧಿಕಾರದ ಸಮಿತಿ ರಚಿಸಿ, ಬಂಡವಾಳ ಹೂಡಿಕೆಗೆ ಅಗತ್ಯ ಸೌಲಭ್ಯ ಒದಗಿಸುತ್ತೇವೆ ಎಂದು ಅವರು ವಿವರಿಸಿದರು. 

‘ಅನರ್ಹ ಶಾಸಕರ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅವರು ಮುಂದಿನ ನಿರ್ಧಾರ ಕೈಗೊಳ್ಳಬಹುದು. ನಮ್ಮ ಜತೆ ಬರುವವರು ಬರಬಹುದು, ನಮ್ಮ ಎದುರು ನಿಲ್ಲುವುದಾದರೆ, ನಿಲ್ಲಬಹುದು. ಏನೇ ಪರಿಸ್ಥಿತಿ ಬಂದರೂ ಎದುರಿಸಲು ನಾವು ಸಿದ್ಧ’

-ಡಾ.ಅಶ್ವಥ್ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News