ಶಿಕ್ಷಣ ಇಲಾಖೆ ಸುತ್ತೋಲೆ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಕ್ರೋಶ

Update: 2019-11-12 14:39 GMT

ಚಿಕ್ಕಮಗಳೂರು, ನ.12: ಸಂವಿಧಾನ ಬರೆದವರು ಅಂಬೇಡ್ಕರ್ ಎಂಬುದು ಜಗಜ್ಜಾಹೀರವಾಗಿದೆ. ಅಂಬೇಡ್ಕರ್ ಸಂವಿಧಾನ ಬರೆಯದೇ ಇದ್ದಿದ್ದರೇ ನಾನು ಶಾಸಕನೂ ಆಗುತ್ತಿರಲಿಲ್ಲ. ಶಿಕ್ಷಣ ಇಲಾಖೆಯಲ್ಲಿ ಸಂವಿಧಾನ ಓದಿರುವಂತಹ ತಜ್ಞ ಅಧಿಕಾರಿಗಳು ಯಾರೂ ಇಲ್ಲ. ಈ ಕಾರಣದಿಂದಾಗಿ ಇಂತಹ ಆದೇಶ ಹೊರ ಬಿದ್ದಿರಬಹುದು, ಇದು ತಪ್ಪು ಎಂದು ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಶಿಕ್ಷಣ ಇಲಾಖೆ ಮೂಲಕ ಶಾಲಾ ಕಾಲೇಜುಗಳಲ್ಲಿ ನ.26ದಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಸುವಂತೆ ಸುತ್ತೋಲೆ ಹೊರಡಿಸಿ, ಆ ಆದೇಶ ಸಂಬಂದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರಕಾರ ಆದೇಶನ್ನು ಹಿಂದಕ್ಕೆ ಪಡೆದ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಶಿಕ್ಷಣ ಇಲಾಖೆಯಲ್ಲಿ ಸಂವಿಧಾನವನ್ನು ಓದಿದವರು, ಅಧ್ಯಯನ ಮಾಡಿದ ಪಂಡಿತರು ಯಾರೂ ಇಲ್ಲ. ಇಂತಹ ಆದೇಶ ಹೊರಬಿದ್ದರುವುದನ್ನು ಮಾಧ್ಯಮಗಳ ಮೂಲಕ ತಿಳಿಯಿತು. ಶಿಕ್ಷಣ ಇಲಾಖೆ ಇಂತಹ ಆದೇಶ ಮಾಡಿರುವುದು ತಪ್ಪು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಆದೇಶವನ್ನು ಸರಕಾರ ಹಿಂದಕ್ಕೆ ಪಡೆದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿದ ತಪ್ಪಿಗೆ ಸರಕಾರವನ್ನು ನಿಂದಿಸುವುದು ಸರಿಯಲ್ಲ, ಆದೇಶವನ್ನು ಹಿಂಪಡೆಯುವ ಮೂಲಕ ಸರಕಾರ ತಪ್ಪನ್ನು ಸರಿಪಡಿಸಿದೆ ಎಂದ ಕುಮಾರಸ್ವಾಮಿ ಇದೇ ವೇಳೆ ಹೇಳಿದರು.

ಅಂಬೇಡ್ಕರ್ ಅವರೇ ಸಂವಿಧಾನ ಬರೆದಿರುವುದು. ಅವರು ಬರೆದಿಲ್ಲ ಎಂದು ಯಾರು ಹೇಳಿದ್ದಾರೋ ಗೊತ್ತಿಲ್ಲ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಶಿಕ್ಷಣ ಇಲಾಖಾಧಿಕಾರಿಗಳು ಹೇಳುವ ಆವಶ್ಯಕತೆ ಇರಲಿಲ್ಲ. ಯಾರೋ ಒಂದಿಬ್ಬರು ಹೇಳಿದ ಕಾರಣಕ್ಕೆ ಇತಿಹಾಸ ಸುಳ್ಳಾಗಲ್ಲ. ಈ ಸಂಬಂಧ ಜನರನ್ನು ಕೆರಳಿಸುವ ಕೆಲಸ ಮಾಡಿರುವುದು ಸರಿಯಲ್ಲ. ದೇಶಕ್ಕೆ ಅಂಬೇಡ್ಕರ್ ಸಂವಿಧಾನದ ಅಗತ್ಯ ಹೆಚ್ಚಿದೆ. ಮೀಸಲಾತಿ ಪಡೆಯುತ್ತಿರುವವರೇ ಮೀಸಲಾತಿ ಬೇಡ ಎನ್ನುವ ತನಕ ಮೀಸಲಾತಿಯೂ ಇರಬೇಕು ಎಂದು ಎಂ.ಪಿ.ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News