ಠಾಣೆಯಲ್ಲೇ ಮಹಿಳಾ ಎಸ್‍ಐ ಮೇಲೆ ಎಎಸ್‍ಐ ಹಲ್ಲೆ: ಪ್ರಕರಣ ದಾಖಲು

Update: 2019-11-12 16:53 GMT

ಮಂಡ್ಯ, ನ.12: ಗಸ್ತು ಕರ್ತವ್ಯಕ್ಕೆ ನಿಯೋಜನೆ ಸಂಬಂಧ ಮಹಿಳಾ ಎಸ್‍ಐ ಮೇಲೆ ಎಎಸ್‍ಐ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಬಸರಾಳು ಠಾಣೆಯಲ್ಲಿ ನಡೆದಿದ್ದು, ಈ ಸಂಬಂಧ ಮಹಿಳಾ ಎಸ್‍ಐ ದೂರು ನೀಡಿದ್ದಾರೆ.

ಬಸರಾಳು ಠಾಣೆಯಲ್ಲಿ ಎಎಸ್‍ಐ ಶಿವನಂಜೇಗೌಡ ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಎಸ್‍ಐ ಜಯಗೌರಿ ಅವರು ದೂರು ನೀಡಿದ್ದು, ಕಲಂ 232, 354, 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಸಾರಾಂಶ: ನ.8ರಂದು ಸಿಎಂ ಅವರ ಬಂದೋಬಸ್ತ್ ಕರ್ತವ್ಯ ಮುಗಿಸಿಕೊಂಡು ಸಂಜೆ 4.10ಕ್ಕೆ ಬಸರಾಳು ಠಾಣೆ ಬಂದೆ. ಡಿವೈಎಸ್ಪಿ ಅವರ ಸೂಚನೆ ಮೇರೆಗೆ ರಾತ್ರಿ ಗಸ್ತುಗೆ ಯಾರನ್ನು ನೇಮಿಸಿದ್ದೀರಿ ಎಂದು ಎಎಸ್‍ಐ ಶಿವನಂಜೇಗೌಡರನ್ನು ಕೇಳಿದೆ. ಅದಕ್ಕೆ ಅವರು ಯಾರೂ ನೇಮಕ ಮಾಡಿಲ್ಲ. ಹೆಚ್‍ಸಿ ಯಾರೂ ಇಲ್ಲ ಎಂದರು. ಅಯೋಧ್ಯೆ ತೀರ್ಪು ಇರುವುದರಿಂದ ರಾತ್ರಿ ಗಸ್ತಿಗೆ ಯಾರನ್ನಾದರೂ ನೇಮಕ ಮಾಡಬೇಕಿತ್ತು. ನೀವೇ ಮಾಡಿ ಎಂದು ಹೇಳಿದೆ.

ಅದಕ್ಕೆ ಶಿವನಂಜೇಗೌಡರು, ನಾನು ಬೆಳಗ್ಗಿನಿಂದ ಕೆಲಸ ಮಾಡಿ ಬಂದಿದ್ದೇನೆ. ಗಸ್ತು ಮಾಡುವುದಿಲ್ಲ ಎಂದರು. ಈಗ ಮನೆಗೆ ಹೋಗಿ ರೆಸ್ಟ್ ಪಡೆದು ರಾತ್ರಿ ಬಂದು ಗಸ್ತು ಮಾಡಿ ಎಂದು ಹೇಳಿದೆ. ಅದಕ್ಕೆ ಜಗಳ ಮಾಡಿದರು. ಬಳಿಕ ಅಶ್ಲೀಲ ಪದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಎಚ್‍ಸಿ ಉಬೇದುಲ್ಲಾ ಖಾನ್, ಪಿಸಿ ಕಲಾವತಿ ಮತ್ತು ಜೀಪ್ ಚಾಲಕ ಶಿವಕುಮಾರ ಹಾಜರಿದ್ದರು. ಹಾಗಾಗಿ ಶಿವನಂಜೇಗೌಡರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜಯಗೌರಿ ದೂರಿದ್ದಾರೆ.

ಈ ಸಂಬಂಧ ಬಸರಾಳು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News