ಈಜಲು ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

Update: 2019-11-12 17:04 GMT

ಕೊಪ್ಪ, ನ.12: ತಾಲೂಕಿನ ಹರಿಹರಪುರ ಸಮೀಪದ ಹೊನಗೋಡು ಬಳಿಯ ಅಗ್ರಹಾರದ ತುಂಗಾ ನದಿಯಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿ ಮಂಗಳವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.  

ಶೃಂಗೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ಆಫ್ರೀದ್ ಬಿನ್ ಹಸನಬ್ಬ (17) ರಜೆಯ ನಿಮಿತ್ತ ಊರಿಗೆ ಬಂದಿದ್ದ, ರವಿವಾರ ತನ್ನ ಓರಗೆಯ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಆಫ್ರೀದ್ ನದಿಯಲ್ಲಿ ಮುಳುಗಿದ್ದಾನೆ. ಈತನ ಪತ್ತೆಗಾಗಿ ರವಿವಾರ ಮತ್ತು ಸೋಮವಾರ ಸ್ಥಳೀಯ ಈಜುಗಾರರು ಅಗ್ನಿಶಾಮಕ ದಳ ಸಿಬ್ಬಂದಿ ಸಾಕಷ್ಟು ಪ್ರಯತ್ನಪಟ್ಟರೂ ಪತ್ತೆ ಕಾರ್ಯ ಯಶಸ್ವಿಯಾಗಿರಲಿಲ್ಲ. 

ಮಂಗಳವಾರ ಬೆಳಗ್ಗೆ ಪತ್ತೆ ಕಾರ್ಯ ಕೈಗೊಳ್ಳಲು ಮಂಗಳೂರಿನ ಬೇಂಗ್ರೆಯ ಈಜುಗಾರರನ್ನು ಕರೆಸುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ನಗರಸಭೆ ಚುನಾವಣೆ ಕಾರಣದಿಂದ ಅವರು ಬರಲಾಗದೆ ಇದ್ದಾಗ ಪಡುಬಿದ್ರೆಯಿಂದ ಮುಳುಗುತಜ್ಞರು ಬರುವ ಭರವಸೆ ನೀಡಿದ್ದರೂ ಬೆಳಗ್ಗೆವರೆಗೂ ಬಂದಿರಲಿಲ್ಲ. ಮಂಗಳವಾರ ಬೆಳಗ್ಗೆ 9-30ರ ಸಮಯದಲ್ಲಿ ಶವ ನೀರಿನಲ್ಲಿ ತೇಲುವುದನ್ನು ಕಂಡು ಮುಳುಗು ತಜ್ಞರನ್ನು ಕರೆಸುವ ಪ್ರಯತ್ನ ಕೈಬಿಡಲಾಯಿತು. 47 ಗಂಟೆಗಳ ನಂತರ ಶವ ಪತ್ತೆಯಾಗಿದೆ. 

ಹರಿಹರಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹೊನಗೋಡಿನ ಮೃತನ ಮನೆಯಲ್ಲಿ ಅಂತಿಮ ವಿಧಿ ವಿಧಾನಗಳು ನಡೆದು ಶೃಂಗೇರಿ ತಾಲೂಕಿನ ಅಡ್ಡಗದ್ದೆಯ ಖಬರಸ್ತಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮೃತನು ತಂದೆ, ತಾಯಿ ಓರ್ವ ಸಹೋದರಿ, ಸಹೋದರನನ್ನು ಅಗಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News