ಸಂತ್ರಸ್ತರಿಗೆಂದು ಸಂಘಸಂಸ್ಥೆಗಳು ಕಳಿಸಿದ್ದ ಅಕ್ಕಿ ಮೂಟೆಗಳು ಹೆಗ್ಗಣಗಳ ಪಾಲು ?

Update: 2019-11-12 17:16 GMT

ಚಿಕ್ಕಮಗಳೂರು, ನ.12: ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದಾಗಿ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದ್ದಲ್ಲದೇ ಸಾವು ನೋವುಗಳು ಸಂಭವಿಸಿವೆ. ಸಾವಿರಾರು ಜನರು ಮನೆ ಕಳೆದುಕೊಂಡಿದ್ದರೆ ನೂರಾರು ಜನರ ಜಮೀನುಗಳು ನಾಶವಾಗಿದ್ದು, ಸಂತ್ರಸ್ತರಿಗೆ ನೂರಾರು ಗಂಜಿಕೇಂದ್ರಗಳನ್ನು ತೆರೆದು ಜಿಲ್ಲಾಡಳಿತ ಆಶ್ರಯ ನೀಡಿತ್ತು. ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾರ್ವಜನಿಕರು, ಸಂಘ ಸಂಸ್ಥೆಗಳು ನಿರೀಕ್ಷೆಗೂ ಮೀರಿ ಸಂತ್ರಸ್ತರಿಗೆ ನೆರವು ನೀಡಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಜಿಲ್ಲೆಗೆ ಅಗತ್ಯ ವಸ್ತುಗಳು ಹರಿದು ಬಂದಿತ್ತು.

ಹೀಗೆ ಹರಿದು ಬಂದ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆಯಾದರೂ ಹೀಗೆ ಬಂದ ಅಗತ್ಯ ವಸ್ತುಗಳ ಪೈಕಿ ಉಳಿದ ಅಕ್ಕಿ ಮೂಟೆಗಳನ್ನು ಅಗತ್ಯ ಇರುವಲ್ಲಿಗೆ ವಿಲೇವಾರಿ ಮಾಡಲು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗುತ್ತಿದ್ದು, ಅಕ್ಕಿ ಮೂಟೆಗಳು ಹುಳ ಹಿಡಿದು ವ್ಯರ್ಥವಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಅತಿವೃಷ್ಟಿ ಸಂದರ್ಭದಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ನೀಡಿದ ಅಗತ್ಯವಸ್ತುಗಳನ್ನು ಸಂತ್ರಸ್ತರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಧಿಕಾರಿಗಳ ತಂಡವೊಂದರ ಮೂಲಕ ಸ್ವೀಕರಿಸಿ ಅದನ್ನು ಜಿಲ್ಲಾಧಿಕಾರಿ ಕಚೇರಿ ಪಕ್ಕದ ವಾರ್ತಾ ಇಲಾಖೆ ಕಚೇರಿಯ ಕೊಠಡಿಯೊಂದರಲ್ಲಿ ಸಂಗ್ರಹಿಸಿಟ್ಟಿತ್ತು. ಸಂಗ್ರಹವಾದ ಅಕ್ಕಿ ಮತ್ತಿತರ ದಿನಸಿ ವಸ್ತುಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ಅದೇ ದಿನ ಸಂತ್ರಸ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಗತ್ಯ ಕ್ರಮ ಕೈಗೊಂಡಿದ್ದರು. ವಾರ್ತಾ ಇಲಾಖೆ ಕೊಠಡಿಯಲ್ಲಿ ಸಂಗ್ರಹವಾದ ಅಗತ್ಯ ವಸ್ತುಗಳ ಪೈಕಿ ಬಹುತೇಕ ವಸ್ತುಗಳನ್ನು ಈಗಾಗಲೇ ಸಂತ್ರಸ್ತರ ಕೇಂದ್ರಗಳಲ್ಲಿದ್ದ ಜನರಿಗೆ ತಲುಪಿಸಲಾಗಿದೆ.

ಸದ್ಯ ಜಿಲ್ಲೆಯಲ್ಲಿ ತೆರೆಯಲಾಗಿದ್ದ ಎಲ್ಲ ಗಂಜಿ ಕೇಂದ್ರಗಳನ್ನು ಮುಚ್ಚಲಾಗಿದ್ದು, ಮೂಡಿಗೆರೆ ತಾಲೂಕಿನಲ್ಲಿದ್ದ ಬಿದರಹಳ್ಳಿಯ ಗಂಜಿ ಕೇಂದ್ರವನ್ನು ಇತ್ತೀಚೆಗಷ್ಟೆ ಮುಚ್ಚಲಾಗಿದೆ. ಗಂಜಿ ಕೇಂದ್ರಗಳನ್ನು ಮುಚ್ಚಿದ್ದರಿಂದ ವಾರ್ತಾ ಇಲಾಖೆ ಕೊಠಡಿಯಲ್ಲಿ ಸುಮಾರು 15 ಕ್ವಿಂಟಾಲ್‍ಗಳಷ್ಟು ಅಕ್ಕಿ ಮೂಟೆಗಳ ದಾಸ್ತಾನು ವಿಲೇವಾರಿಯಾಗದೇ ಉಳಿದುಕೊಂಡಿತ್ತು. ಈ ಕೊಠಡಿಯಲ್ಲಿ ಸುಮಾರು 15 ಮೂಟೆಗಳಲ್ಲಿದ್ದ ಅಕ್ಕಿ ಕಳೆದೊಂದು ತಿಂಗಳಿನಿಂದ ಅಲ್ಲೇ ದಾಸ್ತಾನು ಮಾಡಲಾಗಿದ್ದು, ನಗರದಲ್ಲಿರುವ ವೃದ್ಧಾಶ್ರಮ, ಹಾಸ್ಟೆಲ್‍ಗಳಿಗೆ ಅಕ್ಕಿ ಮೂಟೆಗಳನ್ನು ಅವಕಾಶವಿದ್ದರೂ ಅಧಿಕಾರಿಗಳು ವಿಲೇವಾರಿ ಮಾಡದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇದೀಗ ಅಕ್ಕಿ ಹುಳ ಹಿಡಿದು ಹಾಳಾಗುತ್ತಿದೆ. ಸಾರ್ವಜನಿಕರ ಸಂತ್ರಸ್ತರ ನೆರವಾಗಲಿ ಎಂದು ಸದುದ್ದೇಶದಿಂದ ಕಳಿಸಿದ ಅಕ್ಕಿ ಇಲಿ ಹೆಗ್ಗಣಗಳ ಪಾಲಾಗುತ್ತಿದ್ದರೂ ಅಧಿಕಾರಿಗಳು ಈ ಅಕ್ಕಿ ಮೂಟೆಗಳನ್ನು ಅಗತ್ಯವಿದ್ದಲ್ಲಿಗೆ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಅಲ್ಲದೇ ಸಾರ್ವಜನಿಕರು, ಸಂಘ ಸಂಸ್ಥೆಗಳು ನೀಡಿದ ಅಕ್ಕಿ ಮೂಟೆಗಳ ಪೈಕಿ ಉಳಿದದ್ದನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಇಲ್ಲಿ ದಾಸ್ತಾನು ಮಾಡಲಾಗಿರುವ ಅಕ್ಕಿ ಮೂಟೆಗಳು ದಿನದಿಂದ ದಿನಕ್ಕೆ ಒಂದೊಂದಾಗಿ ಕಾಣೆಯಾಗುತ್ತಿವೆ. ಇಲಿಗಳು, ಹೆಗ್ಗಣಗಳು ಅಕ್ಕಿ ತಿಂದು ಹಾಕುತ್ತಿವೆಯೋ ಅಥವಾ ಅಧಿಕಾರಿಗಳೇ ಅಕ್ಕಿ ಮೂಟೆಗಳನ್ನು ನಾಪತ್ತೆ ಮಾಡುತ್ತಿದ್ದಾರೆಯೋ ತಿಳಿಯುತ್ತಿಲ್ಲ. ಎಡಿಸಿ ಕುಮಾರ್ ಅವರು 15 ಕ್ವಿಂಟಾಲ್ ಅಕ್ಕಿ ದಾಸ್ತಾನು ಉಳಿದಿದೆ ಎನ್ನುತ್ತಿದ್ದಾರೆ. ಆದರೆ ಅಷ್ಟು ಪ್ರಮಾಣದ ಅಕ್ಕಿ ದಾಸ್ತಾನು ಕೊಠಡಿಯಲ್ಲಿಲ್ಲ. 15 ಕ್ವಿಂಟಾಲ್ ಅಕ್ಕಿ ಪೈಕಿ ಕೆಲ ಮೂಟೆಗಳು ನಾಪತ್ತೆಯಾಗಿವೆ. ಕೂಡಲೇ ದಾಸ್ತಾನು ಮಾಡಲಾಗಿರುವ ಅಕ್ಕಿ ಮೂಟೆಗಳನ್ನು ಜಿಲ್ಲಾಡಳಿತ ಹಾಸ್ಟೆಲ್‍ಗಳಿಗಾದರೂ ವಿಲೇವಾರಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈಗ ಎಲ್ಲಿಯೂ ನಿರಾಶ್ರಿತರ ಕೇಂದ್ರ ಇಲ್ಲದಿರುವುದರಿಂದ ಅಕ್ಕಿಯನ್ನು ಬಳಸಲು ಸಾಧ್ಯವಾಗಿಲ್ಲ. ಆದರೆ ಅಕ್ಕಿ ಹಾಳಾಗಲು ಬಿಡುವುದಿಲ್ಲ. ಅನಾಥ ಮಕ್ಕಳ ಶಾಲೆ ಸೇರಿದಂತೆ ಎಲ್ಲಿ ಅಕ್ಕಿಯ ಆವಶ್ಯಕತೆ ಇದೆಯೋ ಅದನ್ನು ಪರಿಶೀಲಿಸಿ ಅಲ್ಲಿಗೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು
- ಕುಮಾರ್, ಎಡಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News