ದಾವಣಗೆರೆ ಮನಪಾ ಚುನಾವಣೆ: ಶಾಂತಿಯುತವಾಗಿ ನಡೆದ ಮತದಾನ

Update: 2019-11-12 17:26 GMT

ದಾವಣಗೆರೆ, ನ.12: ಮಹಾನಗರ ಪಾಲಿಕೆಯ 45 ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ನಡೆಯಿತು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 377 ಮತಗಟ್ಟೆಗಳಲ್ಲಿ ಮಂಗಳವಾರ ಬೆಳಗ್ಗೆ 7ಗಂಟೆಗೆ ಮತದಾನಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನ ಮೂರು ಗಂಟೆಯವರೆಗೆ ಶೇ 31 ರಷ್ಟು ಮತದಾನ ನಡೆದಿದ್ದು, ಜನರು ಮತದಾನಕ್ಕೆ ಬಾರದೆ ಮತಗಟ್ಟೆಗಳು ಬೀಕೋ ಎನ್ನುತ್ತಿದ್ದವು. 3 ಗಂಟೆಯ ನಂತರ ತುಸು ಮತದಾನ ಹೆಚ್ಚಾಯಿತು. ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಮತದಾನ ನಡೆದಿದೆ. 

32 ಮತ್ತು 33ನೇ ವಾರ್ಡ್‍ನಲ್ಲಿ ಮತದಾರರ ಹೆಸರುಗಳು ಅದಲು ಬದಲಾಗಿದ್ದು, ಮತದಾರರು ಗೊಂದಲಗಳಿಗೆ ಒಳಗಾದ ಘಟನೆಯು ನಡೆಯಿತು. 37 ನೇ ವಾರ್ಡ್‍ನ 328, 329 ನೇ ಬೂತ್ ನಲ್ಲಿ ಮತದಾರರಿಗೆ ಕಾಂಗ್ರೆಸ್ ಬೂತ್ ಏಜೆಂಟ್‍ಗಳು ಚಿಹ್ನೆಯುಳ್ಳ ಚೀಟಿ ಕೊಟ್ಟು ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗೀತಾ ದಿಳ್ಯಪ್ಪ ಬೆಂಬಲಿಗರು ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಎಂಜೆಂಟ್ ಗಳ ವಿರುದ್ಧ ಬಿಜೆಪಿ ಕಾರ್ಯಕರ್ತರು ದೂರು ನೀಡಲು ಮುಂದಾದರು. ಚಿಹ್ನೆಯುಳ್ಳ ಚೀಟಿ ತಂದ ಮತದಾರರನ್ನು ಅಧಿಕಾರಿಗಳು ವಾಪಸ್ ಕಳುಹಿಸಿದರು. ಕೆಲಕಡೆ ಮತದಾರರ ಪಟ್ಟಿಯಲ್ಲಿರುವ ಹೆಸರು ನಾಪತ್ತೆಯಾದ ಪ್ರಕರಣಗಳು ಕಂಡು ಬಂದವು ಎನ್ನಲಾಗಿದೆ. 

ಶಾಸಕ ಎಸ್ಸೆಸ್‍ರಿಂದ ಮತದಾನ
ಶಾಸಕ ಶಾಮನೂರು ಶಿವಶಂಕರಪ್ಪ ಅವರು 38ನೇ ವಾರ್ಡ್‍ನ ಮತಗಟ್ಟೆ 318ರಲ್ಲಿ ಮತಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ಈ ಬಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಸಂಸದ ಜಿ.ಎಂ ಸಿದ್ದೇಶ್ವರ ಎರಡು ದಿನ ಬಿಟ್ಟು ಮಾತನಾಡಲಿ ಎಂದರು.  

ಸಂಸದ ಜಿ.ಎಂ.ಸಿದ್ದೇಶ್ವರ ಮತದಾನ
ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆ ಸಂಖ್ಯೆ 236 ರಲ್ಲಿ ಸಂಸದ ಸಿದ್ದೇಶ್ವರ ಪತ್ನಿ ಗಾಯಿತ್ರಿ ಅವರೊಂದಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆಗೆ ಸಂಸದ ಸಿದ್ದೇಶ್ವರ ಆಗಮಿಸಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ ನೀಡುವಂತೆ ಮನವಿ ಮಾಡಿದರು. ಕೈ ಸನ್ನೆ ಮೂಲಕ ಕಮಲದ ಚಿಹ್ನೆಯನ್ನು ಸಂಸದ ಸಿದ್ದೇಶ್ವರ ತೋರಿಸಿದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಮ್ಮ ಕುಟುಂಬ ವರ್ಗದವರೊಂದಿಗೆ ತಮ್ಮ ವಾರ್ಡಿನ ಐಎಂಎ ಹಾಲ್‍ನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ತಮ್ಮ ವಾರ್ಡಿನ ವ್ಯಾಪ್ತಿಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ವಿರಕ್ತಮಠದ ಬಸವಪ್ರಭುಸ್ವಾಮೀಜಿ ಅವರು ಪಾತಾಳಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಜೀಜಾಮಾತ ಶಾಲೆಯ ವಾರ್ಡ್ ನಂ 18 ರ ಮತಗಟ್ಟೆ ಸಂಖ್ಯೆ 155 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. 

ಜಿಲ್ಲಾಧಿಕಾರಿಗಳಿಂದ ಮತಗಟ್ಟೆಗಳಿಗೆ ಭೇಟಿ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ನಗರದ ಡಿಆರ್‍ಆರ್ ಶಾಲೆಯಲ್ಲಿನ ಸ್ಟ್ರಾಂಗ್ ರೂಂ ವ್ಯವಸ್ಥೆ ಮತ್ತು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದರು. 

ಮತಯಂತ್ರಗಳಲ್ಲಿ ಹಣೆಬರಹ: ಅಭ್ಯರ್ಥಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರದಲ್ಲಿದ್ದು, ಇದೇ 14 ರಂದು ನಡೆಯಲಿರುವ ಮತ ಎಣಿಕೆಯಲ್ಲಿ ಬಯಲಾಗಲಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಒಟ್ಟಾರೆ ಸಂಜೆಯ ವರೆಗೂ ನಡೆದ ಮತದಾನದ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಪ್ರಕರಣಗಳು ದಾಖಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News